ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಎಸ್ವಿಪಿ ಮಹಿಳಾ ವಿದ್ಯಾಪೀಠದ ಪದವಿಪೂರ್ವ ಕಾಲೇಜ್ನಲ್ಲಿ 2023-24ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ನಿರಂತರ ಅಧ್ಯಯನದಿಂದ ಜ್ಞಾನಾಭಿವೃದ್ಧಿ ಸಾಧ್ಯ. ನಿಮ್ಮ ಕೊಡುಗೆ ದೇಶಕ್ಕೆ ಅಪರಿಮಿತವಾಗಿರಬೇಕು ಎಂದರು.
ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಶ್ರೀಮಂತಿಕೆ ಹೊಂದಿದವರು ನಿಜವಾದ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇದ್ದವನು ಶ್ರೀಮಂತ. ದಾನ, ಧರ್ಮ, ಸಹಾಯದಂಥ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಭವ್ಯ ಭಾರತ ನಿರ್ವಿುಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದು ಎಂದರು.
ಕಾಲೇಜ್ ಅಧ್ಯಕ್ಷ ಬಸಂತಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಕೀರ್ತಿ ತಂಬದ, ಜಂಟಿ ಕಾರ್ಯದರ್ಶಿ ಜ್ಯೋತಿ ಜಂಗಣ್ಣವರ, ಆಡಳಿತಾಧಿಕಾರಿ ಎಸ್.ಜಿ. ಗದಗ, ಪ್ರಾಚಾರ್ಯು ಎಸ್.ಎನ್. ಕಿಲ್ಲೇದಾರ, ಕಾರ್ಯಾಧ್ಯಕ್ಷ ಸಿ.ವಿ. ಪುಟ್ಟಣ್ಣನವರ ಇದ್ದರು.