ಹನುಮನಾಳದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯರಾದ ಅಮರೇಶಪ್ಪ, ಹನುಮಮ್ಮ ಕೆರಿಕೊಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಮನೂರಪ್ಪ ಮ್ಯಾದನೇರಿ ಇತರರಿದ್ದರು.  
ಜಿಲ್ಲೆ

ಜ್ಞಾನ ವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿ

ರುದ್ರಪ್ಪ ವಾಲಿ

ಕನಕಗಿರಿ: ವಿದ್ಯಾರ್ಥಿಯಾಗಿರುವಾಗಲೇ ಸೇವಾ ಮನೋಭಾವ, ಸಂಸ್ಕೃತಿ, ಪರಂಪರೆ, ಜ್ಞಾನ ವೃದ್ಧಿಸಿಕೊಳ್ಳುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಹೇಳಿದರು.

ತಾಲೂಕಿನ ಹನುಮನಾಳ ಗ್ರಾಮದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ( ಕಾಲೇಜು ವಿಭಾಗ)ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಶಿಬಿರಕ್ಕೆ ಮಂಗಳವಾರ ಚಾಲನಾ ನೀಡಿ ಮಾತನಾಡಿದರು.

ವರ್ಷಕ್ಕೊಮ್ಮೆ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಇಂಥ ಶಿಬಿರಗಳನ್ನು ಬಹುತೇಕವಾಗಿ ಗ್ರಾಮೀಣ ಭಾಗದಲ್ಲಿಯೇ ಹಮ್ಮಿಕೊಳ್ಳುವುದರಿಂದ ಅಲ್ಲಿನ ಜನರ ಜೀವನ ಶೈಲಿ, ಪರಿಸರ, ಇತಿಹಾಸ ತಿಳಿಯುವುದರ ಜತೆಗೆ ಜನರೊಂದಿಗೆ ಬೆರೆತುಕೊಳ್ಳುವುದನ್ನು ಕಲಿಯಬಹದು ಎಂದರು.

ಪ್ರಾಚಾರ್ಯ ಅಮರೇಶ ದೇವರಾಳ ಮಾತನಾಡಿ, ಎನ್‌ಎಸ್‌ಎಸ್ ಮಕ್ಕಳಲ್ಲಿ ಸಮಯ ಪರಿಪಾಲನೆ, ಶಿಸ್ತು, ಬೌದ್ಧಿಕ ವಿಕಾಸಕ್ಕೆ ಅನುಕೂಲವಾಗಲಿದೆ. ಸ್ವಚ್ಛತೆ, ಪರಿಶ್ರಮ, ಪರಿಸರ ಜಾಗ್ರತಿ ಜತೆಗೆ ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆಯಂತಹ ಪಿಡುಗು ಕುರಿತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ತಿಳಿಸಬಹುದು ಎಂದರು.

ನ್ಯಾಯವಾದಿ ಕರಿಯಪ್ಪ ನಾಯಕ, ಮುಖಂಡರಾದ ಮೂಕಪ್ಪ ಕುರುಬರ, ಲಕ್ಷ್ಮಣ್ ವಡಕಿ, ಮಾರುತಿ ಜಾಡಿ, ಉಪನ್ಯಾಸಕರಾದ ಪಂಪಾರಡ್ಡಿಗಚ್ಚಿನಮನಿ, ಶಿವಪುತ್ರಪ್ಪ ಗಳಪೂಜೆ ಇತರರಿದ್ದರು.