ಪಾಂಡವಪುರ ತಾಲೂಕಿನ ಚಿನಕುರಳಿ ಎಸ್‌ಟಿಜಿ ಪಬ್ಲಿಕ್ ಶಾಲೆಯಲ್ಲಿ ನಡೆದ ದಶಮಾನೋತ್ಸವ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಪ್ರೊ.ಎಂ.ರಂಗಸ್ವಾಮಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇದ್ದರು. 
ಜಿಲ್ಲೆ

ಪರಿಶ್ರಮದಿಂದ ಮಾತ್ರ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ

ಎಂ.ರವಿ

ಪಾಂಡವಪುರ: ವಿದ್ಯೆ, ಜ್ಞಾನಾರ್ಜನೆಯನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ, ವಿದ್ಯಾರ್ಥಿಗಳ ಪರಿಶ್ರಮದಿಂದ ಮಾತ್ರ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದು ಯೂನಿಯನ್ ಬ್ಯಾಂಕ್‌ನ ಮಾಜಿ ಉಪ ಪ್ರಧಾನ ವ್ಯವಸ್ಥಾಪಕ ಪ್ರೊ.ಎಂ.ರಂಗಸ್ವಾಮಿ ಹೇಳಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪಬ್ಲಿಕ್ ಶಾಲೆಯ ದಶಮಾನೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಸೋಮವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯೆ ವಿದ್ಯಾರ್ಥಿಗಳ ಬದುಕು ರೂಪಿಸಲಿದೆ. ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಶಿಕ್ಷಣ ಅಗತ್ಯವಾಗಿದೆ. ಇಂತಹ ದಿನಗಳಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಸಿ.ಎಸ್.ಪುಟ್ಟರಾಜು ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಗುರಿ ಇಟ್ಟುಕೊಂಡು ಎಸ್‌ಟಿಜಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆ ಆರಂಭಗೊಂಡು ಹತ್ತು ವರ್ಷ ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಪುಟ್ಟರಾಜು ಅವರು ಕಂಡ ಕನಸು ನನಸಾಗಿದೆ. ದೇಶ, ವಿದೇಶದಲ್ಲಿ ನೀಡುವ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಹಲವು ಟೆಕ್ನಾಲಜಿಗಳನ್ನು ಬಳಸಿಕೊಂಡು ನೀಡಲಾಗುತ್ತಿದೆ. ಶಾಲೆಯಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣದಿಂದಾಗಿ ರಾಜ್ಯದ ಮೂಲೆ ಮೂಲೆಗಳಿಂದ ಪಾಲಕರು ತಮ್ಮ ಮಕ್ಕಳನ್ನು ತಂದು ಎಸ್‌ಟಿಜಿ ಶಿಕ್ಷಣ ದಾಖಲಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಮುಚ್ಚುತ್ತಿವೆ. ಶೇ.50ರಷ್ಟು ಇಂಜಿನಿಯರಿಂಗ್ ಕಾಲೇಜುಗಳು ದಾಖಲಾತಿ ಕೊರತೆಯಿಂದ ಮುಚ್ಚುತ್ತಿರುವುದು ಬೇಸರದ ಸಂಗತಿ. ಪ್ರಸ್ತುತ ಶಿಕ್ಷಣ ಎನ್ನುವುದು ಎಲ್ಲರಿಗೂ ಪ್ರಾಮುಖ್ಯವಾಗಿದೆ. ವಿದ್ಯಾರ್ಥಿಗಳು ದಿನೇ ದಿನೆ ಸಾಕಷ್ಟು ಬುದ್ಧಿವಂತರಾಗುತ್ತಿದ್ದಾರೆ. ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ಒಬ್ಬರು ಅಥವಾ ಇಬ್ಬರು ಐಎಎಸ್, ಐಪಿಎಸ್ ಪರೀಕ್ಷೆ ಉತ್ತೀರ್ಣರಾಗುತ್ತಿದ್ದರು. ಇಂದಿನ ದಿನಗಳಲ್ಲಿ ವರ್ಷಕ್ಕೆ 40-50 ಮಂದಿ ರಾಜ್ಯದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಪಾಸ್ ಮಾಡುತ್ತಿದ್ದಾರೆ. ಎಸ್‌ಟಿಜಿ ಶಿಕ್ಷಣ ಸಂಸ್ಥೆ ಉತ್ತಮವಾದ ಶಿಕ್ಷಣ ಸಂಸ್ಥೆಯಾಗಿದ್ದು ಮಕ್ಕಳು ಇಲ್ಲಿನ ಶಿಕ್ಷಣದ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.

ಸಂಸ್ಥೆ ಅಧ್ಯಕ್ಷರೂ ಆದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಮ್ಮೂರಿನ ನನ್ನ ಸ್ನೇಹಿತರು, ಬಂಧುಗಳು ತಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಹೋಗುತ್ತಿರುವುದನ್ನು ಕಂಡು ಬೇಸರಗೊಂಡು ಆ ಮಕ್ಕಳಿಗೆ ನಗರ ಪ್ರದೇಶದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸಂಸ್ಥೆಯ ಸಿಇಒ ಆದಂತಹ ನನ್ನ ಪುತ್ರ ಸಿ.ಪಿ.ಶಿವರಾಜು ಅವರೊಂದಿಗೆ ಚರ್ಚಿಸಿ 2014ರಲ್ಲಿ ನನ್ನ ತೋಟದ ಮನೆಯಲ್ಲಿ ಕೇವಲ 63 ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ ಆರಂಭಿಸಿದೆವು. ಪಾಲಕರ ಆಶೀರ್ವಾದದಿಂದ ಪ್ರಸ್ತುತ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಸಂಸ್ಥೆ ಕಷ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಸಾಲ ಸೌಲಭ್ಯ ನೀಡಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಿದರು ಎಂದು ಸ್ಮರಿಸಿದರು.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ಶಾಲೆಯ ವಿದ್ಯಾರ್ಥಿ ಎಚ್.ಎ.ದುವನ್‌ಗೌಡ ಅವರನ್ನು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಕಳೆದ ಹತ್ತು ವರ್ಷದಿಂದ ಉತ್ತಮ ಸೇವೆಸಲ್ಲಿಸಿದ ಅತ್ಯುತ್ತಮ ಶಿಕ್ಷಕರನ್ನು ಅಭಿನಂಧಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿದ ಹಲವಾರು ಹಾಡುಗಳಿಗೆ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.

ಸಮಾರಂಭದಲ್ಲಿ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ತನುಶ್ರೀ ಶಿವರಾಜು, ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಟ್ರಸ್ಟಿ ತಮ್ಮಣ್ಣಗೌಡ, ಆಡಳಿತಾಧಿಕಾರಿ ನಿವೇಧಿತ ನಾಗೇಶ್, ಪ್ರಾಂಶುಪಾಲೆ ಮಾಚಮ್ಮ ಇತರರು ಇದ್ದರು.