ಹುಬ್ಬಳ್ಳಿ: ಮೊದಲು ನಾನು ಯಾರೆಂಬುದು ಅರಿಯಬೇಕು. ಯಾರಿಗೆ ಸಂಸ್ಕಾರ ಇರುತ್ತದೋ ಅಂಥ ವ್ಯಕ್ತಿ ನಾನು ಯಾರೆಂಬುದನ್ನು ಅರಿಯುತ್ತಾನೆ. ಅಂಥವರು ಮಾತ್ರ ನೈಜ ಜೀವನ ನಡೆಸಬಲ್ಲರು ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಮಂಗಳವಾರ ಪೇಟೆಯ ರುದ್ರಾಕ್ಷಿಮಠದಲ್ಲಿ ಬುಧವಾರ ಏರ್ಪಡಿಸಿದ್ದ ಲಿಂಗದೀಕ್ಷೆ, ರುದ್ರಾಕ್ಷಿ ಧಾರಣೆ ಹಾಗೂ ನಿಜಗುಣರ ತೊಟ್ಟಿಲೋತ್ಸವ, ನಿಜಗುಣ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾನು ಯಾರೆಂಬುದನ್ನು ಅರಿತವರು ಮಾತ್ರ ಸತ್ಯ, ಧರ್ಮ, ನೀತಿಯತ್ತ ಹೋಗುತ್ತಾರೆ. ಯಾರು ಅಹಂಕಾರದಲ್ಲಿ ಮುಳುಗುತ್ತಾರೋ ಅಂಥವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಆತ್ಮಜ್ಞಾನದ ಕುರಿತು ಚಿಂತನೆ ಮಾಡಿದಾಗ ಮಾತ್ರ ಶಾಂತಿ ಬಿತ್ತುತ್ತದೆ. ಹೀಗಾಗಿ ನಾವೆಲ್ಲರೂ ಒಂದೆಂಬ ಭಾವ ಮೂಡಬೇಕು. ಆತ್ಮಜ್ಞಾನ ಒಂದಾದಗ ಮಾತ್ರ ನಾವೆಲ್ಲರೂ ಒಂದೆನ್ನಲು ಸಾಧ್ಯ ಎಂದರು.
ದೇಹ -ಭಾವ ಬೇರೆ ಬೇರೆಯಾದಾಗ ನಾವು ಬೇರೆ ಎಂಬ ಭಾವ ಮೂಡುತ್ತದೆ. ಇಂತಹ ಭಾವದಿಂದ ದೇಶ-ದೇಶಗಳ ನಡುವೆ ಯುದ್ಧ ನಡೆಯುತ್ತದೆ. ಆದರೆ, ಭಾರತ ಆತ್ಮಜ್ಞಾನ ಪರಂಪರೆಯನ್ನು ಬೆಳೆಸಿಕೊಂಡು ಬಂದ ದೇಶವಾಗಿದೆ. ರುದ್ರಾಕ್ಷಿಮಠ 75 ವರ್ಷ ಜನರನ್ನು ಇಂತಹ ಆತ್ಮಜ್ಞಾನದತ್ತ ಕೊಂಡೊಯ್ದಿದೆ. ಸಾವಿರಾರು ಜನರಿಗೆ ಧರ್ಮದ ದಾರಿ, ಚಿಂತನೆ ಮೂಡಿಸಿದ ಮಠವಾಗಿದೆ ಎಂದರು.
ರುದ್ರಾಕ್ಷಿಮಠದಲ್ಲಿ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವದ ಅಂಗವಾಗಿ ಬೆಳಗ್ಗೆ 575 ಕುಂಭೋತ್ಸವ, ತೊಟ್ಟಿಲೋತ್ಸವ ಅದ್ಧೂರಿಯಾಗಿ ನಡೆಯಿತು.
ಮರೇಗುದ್ದಿ ಶ್ರೀ ಅಡವಿಸಿದ್ಧೇಶ್ವರಮಠದ ಶ್ರೀ ನಿರುಪಾದ ಸ್ವಾಮೀಜಿ ಅವರಿಗೆ ನಿಜಗುಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಂದಿಗುಂದಿ ಶ್ರೀ ಶಿವಾನಂದ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ, ನವಲಗುಂದದ ಶ್ರೀ ಬಸವಲಿಂಗ ಸ್ವಾಮೀಜಿ, ಗುರುಗುಂಟದ ಶ್ರೀ ಸದಾನಂದ ಶಿವಾಚಾರ್ಯರು, ಕುಕುನೂರಿನ ಶ್ರೀ ಚನ್ನಮ್ಮಲ್ಲ ಸ್ಚಾಮಿಜಿ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ಬಿ.ಎಸ್. ಮಾಳವಾಡ, ಕೆ.ಎಸ್. ಜಂಗ್ಲಪ್ಪಗೌಡರ, ಮಲ್ಲಿಕಾರ್ಜುನ ಸಾವಕಾರ, ಮಲ್ಲಿಕಾರ್ಜುನ ಶಿರಗುಪ್ಪಿ, ಶಂಬು ಲಕ್ಷ್ಮೇಶ್ವರ, ಮಹಾಂತೇಶ ಗಿರಿಮಠ ಇತರರು ಇದ್ದರು.