ಹಾಸನ: ಯಾವುದಾದರೂ ಒಂದು ದೇಶದ ಪ್ರಗತಿಯನ್ನು, ಎತ್ತರವನ್ನು, ಅಭಿವೃದ್ಧಿಯನ್ನು ತಿಳಿದುಕೊಳ್ಳಬೇಕಾದರೆ ಆ ದೇಶದ ಶಿಕ್ಷಕರ ನೈತಿಕತೆ, ಬದುಕಿನ ಮೌಲ್ಯಗಳನ್ನು, ಗುಣಮಟ್ಟದ ಬೋಧನೆಯ ವ್ಯಕ್ತಿತ್ವವನ್ನು ತಿಳಿದುಕೊಂಡರೆ ಸಾಕು, ಆ ದೇಶದ ಅಭಿವೃದ್ಧಿಯನ್ನು ತಿಳಿದುಕೊಳ್ಳಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಗರದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಸ್.ರಾಧಾಧಕೃಷ್ಣನ್ ಅವರ ವ್ಯಕ್ತಿತ್ವಕ್ಕೆ ಸರಿಸಾಟಿಯಾಗಬಲ್ಲ ವ್ಯಕ್ತಿತ್ವದ ಡಾ.ಗುರುರಾಜ ಕರ್ಜಗಿ ಅವರಂತಹ ವ್ಯಕ್ತಿಯನ್ನು ಕರೆಯಿಸಿ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಭಾಷಣ ಮಾಡಿಸಿದ್ದು ಶ್ಲಾಘನೀಯ. ಅವರು ಕರುಣಾಳು ಬಾ ಬೆಳಕೆ ಎಂಬ ಅಂಕಣದ ಮೂಲಕ ನಾಡಿನ ಜನಮಾನಸವನ್ನು ಮುಟ್ಟಿ ಅವರಲ್ಲಿರುವ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ತರುವಂತಹ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಗುರುರಾಜ ಕರ್ಜಗಿ ಅವರು, ಪರೀಕ್ಷೆಗಾಗಿ ಕಲಿಸಿದ್ದು ಪರೀಕ್ಷೆ ಮುಗಿದ ಕೆಲವೇ ತಿಂಗಳಲ್ಲಿ ಮರೆತು ಹೋಗುತ್ತದೆ. ಆದರೆ, ತರಗತಿಯಲ್ಲಿ ಶಿಕ್ಷಕರು ಕಲಿಸಿದ ಮೌಲ್ಯಗಳನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಕೃತಕ ಬುದ್ಧಿಮತ್ತೆಗಿಂತ ಸಹಜ ಬುದ್ಧಿಮತ್ತೆ ಸರ್ವಕಾಲಿಕ ಶ್ರೇಷ್ಠ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದ ನಂತರ ಶಿಕ್ಷಕರ ಜವಾಬ್ದಾರಿ ಮತ್ತಷ್ಟೂ ಹೆಚ್ಚಾಗಿದೆ ಎಂದರು.
ಶಿಕ್ಷಕರು ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತಿದ್ದರೆ ಯಾವುದೇ ತಂತ್ರಜ್ಞಾನ ನಿಮ್ಮ ಸ್ಥಾನ ತುಂಬಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಕೊಡುವ ಶಿಕ್ಷೆ ಅವರಿಗೆ ಬದುಕಿನ ಮೌಲ್ಯಗಳನ್ನು ಕಲಿಸಿಕೊಡುವಂತಿರಬೇಕು. ಹುಟ್ಟಿನಿಂದ ಯಾವುದೇ ಮಗು ದಡ್ಡನಾಗಿರುವುದಿಲ್ಲ. ಪ್ರತಿಯೊಂದು ಮಗುವಿನಲ್ಲೂ ಅದರದೇ ಆದ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಅನಾವರಣ ಮಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಭಾಗದ ಶಿಕ್ಷಕರು ಪಾಲ್ಗೊಂಡಿದ್ದರು. ಜಿಲ್ಲಾಡಳಿತದಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆಯಾ ತಾಲೂಕಿನಲ್ಲಿ ಗರಿಷ್ಠ ಅಂಕ ದಾಖಲಿಸಿದ ರಾಜ್ಯ ಪಠ್ಯಕ್ರಮ, ಸಿಬಿಎಸ್ಸಿ, ಐಸಿಎಸ್ಸಿ ಶಾಲೆಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಶಕಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಶಾಲಾ ಆಡಳಿತ ಮಂಡಳಿಗಳಿಗೆ ವಿದ್ಯಾ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆದಿಚುಂಚನಗಿರಿ ಹಾಸನ ಶಾಖ ಮಠದ ಶ್ರೀಶಂಭುನಾಥ ಸ್ವಾಮೀಜಿ, ಶಾಸಕ ಸ್ವರೂಪ್ಪ್ರಕಾಶ್, ಹಾಸನ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಇ. ಶಿವರಾಮೇಗೌಡ, ಗೌರವ ಅಧ್ಯಕ್ಷ ಡಾ.ಎಚ್.ಎಸ್. ಅನಿಲ್ ಕುಮಾರ್, ಕಾರ್ಯದರ್ಶಿ ಟೈಮ್ಸ್ ಗಂಗಾಧರ್, ಉಪಾಧ್ಯಕ್ಷರಾದ ತಾರ ಎಸ್. ಸ್ವಾಮಿ, ಶಾಸ್ತಾ ಪಬ್ಲಿಕ್ ಶಾಲೆಯ ವೆಂಕಟರಾಮು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಲರಾಮ, ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾಮ್ಸ್ ಕರ್ನಾಟಕದ ರಾಜ್ಯ ಪ್ರತಿನಿಧಿ ಪವನ್ ಮಂಜೇಗೌಡ, ಮಲ್ನಾಡ್ ಝಾಕೀರ್, ಹಲಸುಲಿಗೆ ಗಿರೀಶ್, ಬೇಲೂರಿನ ಪ್ರಕಾಶ್, ರಂಗನಾಥ್, ಅರಕಲಗೂಡಿನ ಸುಬ್ಬರಾವ್, ಹೊಳೆನರಸೀಪುರದ ಅತೀಥ್, ಆಲೂರಿನ ಆನಂದ್, ಚನ್ನರಾಯಪಟ್ಟಣದ ಡಾ.ಭಾರತಿ ನಾಗೇಶ್, ಅರಸೀಕೆರೆ ಅನಂತ್ ಕುಮಾರ್, ಹಾಸನದ ಎಚ್.ಡಿ ಕುಮಾರ್ ಉಪಸ್ಥಿತರಿದ್ದರು.