ಮಡಿಕೇರಿ: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರರವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿದರು.
ಅಹವಾಲು ಸ್ವೀಕಾರಕ್ಕೂ ಮೊದಲು ಮಾತನಾಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರರವರು, ಭಾರತ ಸಂವಿಧಾನವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನದ ಆಶೋತ್ತರ ಮತ್ತು ಆಶಯಗಳನ್ನು ಅರ್ಥಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಇದೆ. ಆದ್ದರಿಂದ ಸರ್ಕಾರದ ಯೋಜನೆಗಳು ಕಟ್ಟಕಡೆಯ ಜನರಿಗೆ ತಲುಪಬೇಕು. ಎಲ್ಲರೂ ಸರಿಸಮಾನವಾಗಿ ಬದುಕು ನಡೆಸುವಂತಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಸಮೃದ್ಧಿಯ ಜೀವನ ನಡೆಸುವಂತಾಗಬೇಕು. ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜತೆಗೆ ಕರ್ತವ್ಯ ಪಾಲಿಸುವುದನ್ನು ಮರೆಯಬಾರದು. ಸಂವಿಧಾನದಲ್ಲಿ ಶಾಸಕಾಂಗ ಕಾನೂನು ಜಾರಿ ಮಾಡಿದರೆ, ಕಾರ್ಯಾಂಗ ಅನುಷ್ಠಾನಗೊಳಿಸಲಿದೆ. ನ್ಯಾಯಾಂಗವು ಕಾನೂನನ್ನು ಸಂರಕ್ಷಣೆ ಮಾಡುತ್ತದೆ. ಜತೆಗೆ ಮಾಧ್ಯಮ ರಂಗವು ಸಮಾಜಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ ಎಂದು ವಿವರಿಸಿದರು.
ಸಾರ್ವಜನಿಕವಾಗಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಸಮಾಜದಲ್ಲಿ ಉತ್ತರದಾಯಿತ್ವ ಹೊಂದಿರಬೇಕು. ಆ ನಿಟ್ಟಿನಲ್ಲಿ ಕರ್ತವ್ಯ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಸಮಾಜದಲ್ಲಿ ಮಾದರಿಯಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ಸಾರ್ವಜನಿಕರಿಗೆ ತೊಂದರೆಯಾದಲ್ಲಿ/ ಕರ್ತವ್ಯ ಲೋಪ ಎಸಗಿದ್ದಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ. ಆ ನಿಟ್ಟಿನಲ್ಲಿ ಲೋಕಾಯುಕ್ತವು ವಿಚಾರಣೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ. ಲೋಕಾಯುಕ್ತ ಸಂಸ್ಥೆಗೆ ವೈಯಕ್ತಿಕ ಹಾಗೂ ಸಾರ್ವಜನಿಕ ಹಕ್ಕುಗಳ ಬಗ್ಗೆ ದೂರು ಸಲ್ಲಿಸಬಹುದಾಗಿದ್ದು, ವೈಯಕ್ತಿಕ ಹಾಗೂ ಸಾರ್ವಜನಿಕ ಹಕ್ಕುಗಳು ಉಲ್ಲಂಘನೆ ಆಗದಂತೆ ಗಮನಹರಿಸಬೇಕು. ಉಲ್ಲಂಘನೆಯಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆಯಬಹುದು. ಹಾಗೆಯೇ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬೇಕಿದೆ. ಪ್ರತಿಯೊಬ್ಬರೂ ಶಿಸ್ತು ಬದ್ಧ ಜೀವನ ನಡೆಸಬೇಕು. ಸಾರ್ವಜನಿಕ ಜೀವನದಲ್ಲಿ ದ್ರೋಹ ಬಗೆಯಬಾರದು. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ರೀತಿಯಿಂದ ನಡೆದುಕೊಳ್ಳಬೇಕು ಎಂದು ವಿವರಿಸಿದರು.
ಸಾರ್ವಜನಿಕರ ಕುಂದುಕೊರತೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ೩೯ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಗನ್ನು ಸ್ಥಳದಲ್ಲಿಯೇ ಕರೆಸಿ ವಿಚಾರಣೆ ನಡೆಸಿದರು.
ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಮಡಿಕೇರಿ ನಗರದಿಂದ ಜಿಲ್ಲಾ ಪಂಚಾಯಿತಿ ಕಚೇರಿ ಹೊರಭಾಗದಲ್ಲಿ ಇರುವುದರಿಂದ ಪ್ರತೀ ನಿತ್ಯ ಅರ್ಧ ಗಂಟೆಗೊಮ್ಮೆ ಬಸ್ ಸೌಕರ್ಯ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಜಿಲ್ಲಾ ರಿಜಿಸ್ಟ್ರಾರ್ ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತದ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ನಾರಾಯಣ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಲೋಕಾಯುಕ್ತ ಎಸ್.ಪಿ.ಸುರೇಶ್ ಬಾಬು, ಮೈಸೂರು ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಕೃಷ್ಣಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಮಡಿಕೇರಿ ಲೋಕಾಯುಕ್ತ ಪೊಲೀಸ್ ಇನ್ಸೆಪೆಕ್ಟರ್ ಲೋಕೇಶ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.