ಶಿವಮೊಗ್ಗ: ಯುವ ಸಮಾಜ ಇತಿಹಾಸದ ಮೌಲ್ಯಗಳನ್ನು ಅರಿಯಬೇಕಿದೆ. ಆದರೆ ಇಂದು ಇತಿಹಾಸವೇ ಕಣ್ಮರೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಜೀವನ ಮೌಲ್ಯಗಳಿಂದ ಯುವ ಸಮೂಹ ತನ್ನ ವೈಯುಕ್ತಿಕ ಸಮಗ್ರತೆಯನ್ನು ಸುಸ್ಥಿರಗೊಳಿಸಿಕೊಳ್ಳಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಮತ್ತು ಯುಎನ್‌ಒಡಿಸಿ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸುಸ್ಥಿರ ವೈಯಕ್ತಿಕ ಸಮಗ್ರತೆ, ಉತ್ತಮ ಜೀವನ ಮತ್ತು ಆರೋಗ್ಯ ಎಂಬ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಸಮಾಜದ ಪ್ರಾಮುಖ್ಯ ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಜೀವನ ಮೌಲ್ಯಗಳ ಮೂಲಕ ಸಮಸಮಾಜ ನಿರ್ಮಾಣ ಮಾಡುವುದು ಯುವ ಸಮೂಹದ ಗುರಿಯಾಗಲಿ ಎಂದು ಆಶಿಸಿದರು.
ನಿರಾಶೆಗಿಂತಲು ಮನುಷ್ಯನಲ್ಲಿ ಕುಸಿಯುವಂತೆ ಮಾಡುವ ಇನ್ನೊಂದು ವಿಚಾರವಿಲ್ಲ. ಜೀವನದ ಸವಾಲುಗಳನ್ನು ಮೌಲ್ಯಭರಿತ ವ್ಯಕ್ತಿತ್ವದಿಂದ ಎದರುರಿಸಬೇಕಿದೆ. ಎಲ್ಲ ಸಮಸ್ಯೆಗಳಿಗೆ ವಿಜ್ಞಾನ ಪರಿಹಾರ ನೀಡುವುದಿಲ್ಲ. ಆದರೆ ಜೀವನದ ಮೌಲ್ಯಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕ್ರಮ ಹೇಳಿಕೊಡಲಿವೆ ಎಂದರು.
ದಕ್ಷಿಣ ಏಷ್ಯಾದ ಯುಎನ್‌ಒಡಿಸಿ ಸಂವಹನ ಅಧಿಕಾರಿ ಸಮರ್ಥ ಪಾಟಕ್ ಮಾತನಾಡಿ, ಸಮಾಜದ ಉನ್ನತಿಕರಣದ ದೃಷ್ಟಿಯಿಂದ ಯುವ ಸಮೂಹ ತನ್ನ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಿದೆ. ಕರೊನಾ, ಡ್ರಗ್ಸ್, ಸೈಬರ್ ಅಪರಾಧ ಮುಂತಾದ ಸವಾಲುಗಳನ್ನು ಸಮಾಜ ಎದುರಿಸುತ್ತಿದೆ. ಅಂಧತ್ವದ ವಾತಾವರಣದಿಂದ ಹೊರಬರುವ ಮೌಲ್ಯಾಧಾರಿತ ನಡೆ ಯುವ ಸಮೂಹದ್ದಾಗಬೇಕಿದೆ ಎಂದು ಹೇಳಿದರು.
ವಿಶ್ವದಲ್ಲಿ 296 ಮಿನಿಯಮ್ ಮಂದಿ ಮಾದಕವ್ಯಸನಿಗಳಾಗಿದ್ದಾರೆ ಎಂದು ಸರ್ವೆಯೊಂದು ತಿಳಿಸಿದೆ. ಇನ್ನಾದರೂ ಯುವ ಸಮೂಹ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಿದೆ. ಧ್ವನಿಯಿಲ್ಲದವರ ಧ್ವನಿಯಾಗಿ ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಮಗ್ರ ಚಿಂತನೆಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಅಭಿವೃದ್ಧಿ ಪಡಿಸಿಕೊಂಡು ಸಾಗಬೇಕು. ಪ್ರಾಮಾಣಿಕತೆ ಎಂಬುದು ಸನ್ನಿವೇಶಗಳ ಆಧಾರದಲ್ಲಿ ಕೆಲವೊಮ್ಮೆ ವ್ಯತ್ಯಾಸಗಳಾಗಬಹುದು. ಹಾಗಾಗಿ ನಮ್ಮ ಸುತ್ತಲಿನ ವಾತಾವರಣವನ್ನು ಆರೋಗ್ಯಯುತವಾಗಿರುವಂತೆ ಎಚ್ಚರ ವಹಿಸಬೇಕೆಂದರು.
ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಪ್ರಾಚಾರ್ಯ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಎಂಬಿಎ ವಿಭಾಗದ ನಿರ್ದೇಶಕ ಡಾ.ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕಿ ಅನುರಾಧಾ ಮುಂತಾದವರಿದ್ದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ದೈಹಿಕ ಆರೋಗ್ಯ ಸುಧಾರಣೆ ಕುರಿತು ಜಯಶ್ರೀ ಹಳ್ಳೂರು ಹಾಗೂ ವೈದ್ಯ ಡಾ.ಪಿ.ನಾರಾಯಣ, ದೀರ್ಘಾವಧಿಯ ಯಶಸ್ಸು ಕುರಿತು ಜಿಲ್ಲಾ ನ್ಯಾಯಾಧೀಶ ಚಂದನ್, ಭಾವನಾತ್ಮಕ ಯೋಗ ಕ್ಷೇಮ ಕುರಿತು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕರಣ್ ಹಾಗೂ ಮನೋವೈದ್ಯ ಡಾ.ನವೀನ್ ಆನಂದ್, ಆರೋಗ್ಯಕರ ಸಂಬಂಧ ಕುರಿತು ಸಂಜನಾ ಫರ್ನಾಂಡೀಸ್ ಹಾಗೂ ಡಾ.ಅರ್ಚನಾ ಭಟ್, ಸ್ಥಿತಿಸ್ಥಾಪಕತ್ವ ಕುರಿತು ಅಪೇಕ್ಷಾ ಪ್ರಭು ಹಾಗೂ ಪ್ರೊ.ನ್ಯಾನ್ಸಿ, ನೈತಿಕ ನಿರ್ಧಾರ ಮಾಡುವ ಬಗೆ ಕುರಿತು ಶ್ರೀ ವೀರೇಶಾನಂದ ಸ್ವಾಮೀಜಿ ಮಾತನಾಡಿದರು.