ಜಮಖಂಡಿ: ತಾಲೂಕಿನ ರೈತರು ಮಳೆ ಅಥವಾ ಮಣ್ಣಿನ ತೇವಾಂಶ ಅರಿತು ಬಿತ್ತನೆ ಮಾಡಿ, ಉತ್ತಮ ಬೆಳೆ ಮತ್ತು ಇಳುವರಿಯೊಂದಿಗೆ ಹೆಚ್ಚಿನ ಆದಾಯ ಪಡೆದುಕೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಮಾತನಾಡಿ, ತಾಲೂಕಿನ ಜಮಖಂಡಿ, ಸಾವಳಗಿ ಹೋಬಳಿಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು ಮಾಡಲಾಗಿದೆ. ಸೋಯಾ, ಅವರೆ, ಉದ್ದು, ಹೆಸರು ಬೀಜಗಳ ದಾಸ್ತಾನು ಮಾಡಲಾಗಿದೆ ಎಂದರು.
ಉಪ ಕೃಷಿ ನಿರ್ದೇಶಕ ಕೆ. ಎಸ್. ಅಗಸನಾಳ ಮಾತನಾಡಿ, ರೈತರು ಕೇವಲ ಒಂದೇ ಬೆಳೆ ಬೆಳೆಯದೆ ಹಂಗಾಮುವಾರು ವಿವಿಧ ಬೆಳೆಗಳನ್ನು ಬೆಳೆಯಬೇಕು. ಮಣ್ಣು ಆರೋಗ್ಯ ಚೀಟಿಯ ಶಿಾರಸಿನಂತೆ ಪೋಷಕಾಂಶಗಳ ಬಳಕೆ ಮಾಡಿ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಜಯ ಕಡಪಟ್ಟಿ, ನಾಗಪ್ಪ ಸನದಿ, ಕೃಷಿ ಅಧಿಕಾರಿಗಳಾದ ಎಂ. ಎಸ್. ಬುಜರುಖ್, ಶಂಕರರಾವ ಪವಾರ, ಆರ್. ಎನ್. ತುಳಸಿಗೇರಿ, ಕೆ. ಎ. ಜಮಖಂಡಿ ಇತರರಿದ್ದರು.