ಜಿಲ್ಲೆ

ಪದ್ಯದ ಪರಿಪೂರ್ಣ ಅರ್ಥ ತಿಳಿದುಕೊಳ್ಳಿರಿ

ಅರಸೀಕೆರೆ ಗ್ರಾಮಾಂತರ: ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ಕಂಠಪಾಠ ಮಾಡಿ ಶಿಕ್ಷಕರಿಗೆ ಒಪ್ಪಿಸುವುದಲ್ಲ, ಪದ್ಯದ ಪರಿಪೂರ್ಣ ಅರ್ಥವನ್ನು ತಿಳಿದುಕೊಳ್ಳಬೇಕು ಎಂದು ಸಂಸ್ಕಾರ ಭಾರತಿ ಸಂಚಾಲಕ ಗಣೇಶ್ ಉಡುಪ ಹೇಳಿದರು.

ಬಾಣಾವರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಸಂಸ್ಕಾರ ಭಾರತಿ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪಠ್ಯಧಾರಿತ ಗಮಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳೆಗನ್ನಡ ಪದ್ಯಗಳು ಸಂಗೀತದ ಹಲವು ರಾಗಗಳನ್ನು ಹೊಂದಿಕೊಂಡಿರುತ್ತವೆ. ಆ ರಾಗದ ಅನುಭವ ಪಡೆದು ಅದರಂತೆ ಗಮಕದ ರೂಪದಲ್ಲಿ ಹಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಹಿಂದೆ ಚಲನಚಿತ್ರಗಳು ಹಲವು ಕಥೆಗಳನ್ನು ಆಧರಿಸಿ ತೆಗೆಯಲಾಗುತ್ತಿತ್ತು. ಅವುಗಳಲ್ಲಿ ಚಿತ್ರಗೀತೆಗಳು ರಾಗ ತಾಳಗಳನ್ನು ಒಳಗೊಂಡು ಮೂಡಿ ಬರುತ್ತಿದ್ದವು. ಆದರೆ, ಈಗಿನ ಮಕ್ಕಳಿಗೆ ಅದರ ಅನುಭವವೇ ಇಲ್ಲದಂತಾಗಿದೆ ಎಂದರು.
ಗಣೇಶ್ ಉಡುಪ ಅವರು ಗಮಕದ ರೂಪದಲ್ಲಿ ಹಾಡಿದ ಕಾವ್ಯ ಭಾಗದ ಅರ್ಥವನ್ನು ಕನ್ನಡ ಶಿಕ್ಷಕ ಕೆ.ರಮೇಶ್ ವಿವರಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ವಿ. ಕುಮಾರ್, ಎಂ.ಕೆ. ವಾಸುದೇವ್, ಡಿ.ಎಸ್. ರಾಮಸ್ವಾಮಿ ಇದ್ದರು.