ಬೇಲೂರು: ಇತ್ತೀಚಿನ ದಿನಗಳಲ್ಲಿ ಹೊರಗೆ ಹೋಗುವ ವ್ಯಕ್ತಿ ಅಥವಾ ಮಕ್ಕಳು ಸಹ ನೇರವಾಗಿ ಮನೆಗೆ ವಾಪಸ್ ಬರುತ್ತಾರೋ ಇಲ್ಲವೋ ಎಂಬ ನಂಬಿಕೆ ಇಲ್ಲದಿರುವುದರಿಂದ ಸರ್ಕಾರ ಈಗ ಹೊಸದಾಗಿ ಕಾಯ್ದೆ ಜಾರಿಗೆ ತಂದಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಂದ್ರ ಸಲಹೆ ನೀಡಿದರು.
ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಲೈಂಗಿಕ ಅಪರಾಧ ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಕಾಲದಲ್ಲಿ ಮಗು ಎಂದರೆ 1ರಿಂದ 18 ವರ್ಷದವರೆಗಿನ ಮಕ್ಕಳು ಎಂದು ಗುರುತಿಸಲಾಗಿದೆ. ಜತೆಗೆ ಇಂತಹ ಪ್ರಕರಣಗಳು ಹೆಚ್ಚಾಗಿ ಮಕ್ಕಳಿಗೆ ಶಾಲೆಗೆ ಡ್ರಾಪ್ ಕೊಡುವ ನೆಪದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಆದ್ದರಿಂದ ಮಕ್ಕಳು ಡ್ರಾಪ್ ಕೊಡುವವರ ಬಗ್ಗೆ ಎಚ್ಚರ ವಹಿಸುವುದು ಮತ್ತು ಅವರ ಜತೆ ಬರುವ ಮೊದಲು ಮೂರ‌್ನಾಲ್ಕು ಬಾರಿ ಯೋಚಿಸಿ ಮುಂದೆ ಹೋಗಬೇಕು. ಹಾಗೂ ಲೈಂಗಿಕ ಶೋಷಣೆಗೆ ಬಾಲಕಿ ಹಾಗೂ ಬಾಲಕ ಒಳಗಾದಲ್ಲಿ ಪಾಲಕರು ಅಥವಾ ಶಾಲಾ ಶಿಕ್ಷಕರು ಕೃತ್ಯವೆಸಗಿದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದೆ. ಇಂತಹ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು. ಅಲ್ಲದೆ 20 ವರ್ಷದೊಳಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ 18 ವರ್ಷ ಅಥವಾ ಜೀವಾವಧಿ ಶಿಕ್ಷೆಗೆ ಹಾಗೂ 16 ವರ್ಷದೊಳಗಿನ ಪ್ರಕರಣಗಳಲ್ಲಿ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಈ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಬೇಲೂರು ಪಿಎಸ್‌ಐ ಪ್ರವೀಣ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿ ಪಾಲಕರು ಮತ್ತು ಮಕ್ಕಳು ಎಷ್ಟು ಎಚ್ಚರ ವಹಿಸಿದರೂ ಸಾಲದು. ಆದ್ದರಿಂದ ಕಾನೂನು ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷವೊಂದರಲ್ಲೇ 16 ಪೋಕ್ಸೋ ಪ್ರಕರಣ ದಾಖಲಾಗಿದ್ದು, ಒಂದು ನೈಜ ಘಟನೆಯಾದರೆ ಉಳಿದದ್ದು ಹೆಣ್ಣು ಮಕ್ಕಳೇ ಹುಡುಗರ ಜತೆ ಓಡಿ ಹೋಗಿರುವ ಘಟನೆಗಳಾಗಿವೆ. ಇಂತಹ ಘಟನೆಗಳಲ್ಲಿ ಇಬ್ಬರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸದ ಸಂದರ್ಭ ಪ್ರೀತಿ, ಪ್ರೇಮದ ಹೆಸರಲ್ಲಿ ಜೀವನ ಹಾಳು ಮಾಡಿಕೊಳ್ಳುವುದಕ್ಕಿಂತ ಉತ್ತಮ ವಿದ್ಯಾಭ್ಯಾಸದೊಂದಿಗೆ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ದಿವ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಗೌಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಿವಮರಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಂ.ಪಿ.ದಿನೇಶ್, ಉಪನ್ಯಾಸಕ ಎಂ.ಇ.ಕುಮಾರ್‌ಗುಪ್ತ, ಮುಖ್ಯಶಿಕ್ಷಕರಾದ ಚೇತನ್‌ಕುಮಾರ್, ಉಮೇಶ್ ಇದ್ದರು.