ಜಿಲ್ಲೆ

ಅಕ್ಷರದವ್ವ ಸಾವಿತ್ರಿ ಬಾಪುಲೆ ಜೀವನ ಅರಿಯಿರಿ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹೆಣ್ಣು ಮನೆಯಿಂದ ಹೊರ ಬಾರದ ದಿನಗಳಲ್ಲಿಯೇ ಶಿಕ್ಷಕಿಯಾಗಿ ಅಕ್ಷರ ಕಲಿಸಿದ ಸಾವಿತ್ರಿ ಬಾಪುಲೆ ಅವರ ಜೀವನ ಚರಿತ್ರೆಯನ್ನು ಶಿಕ್ಷಕರು ತಿಳಿದುಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸಾವಿತ್ರಿ ಬಾಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿ ಬಾಪುಲೆ ವಿಚಾರ ಸಂಕಿರಣ ಹಾಗೂ ರಾಜ್ಯ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಉದ್ಯೋಗ ಮಾಡುವುದಿರಲಿ, ಮನೆಯಿಂದ ಹೊರ ಬರುವುದೇ ಕಷ್ಟಕರವಾದ ದಿನಗಳಿದ್ದವು. ಅಂತಹ ಪರಿಸ್ಥಿತಿಯಲ್ಲಿಯೂ ಸಾಮಾಜಿಕ ಕ್ರಾಂತಿ ಮಾಡಿದ ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾಪುಲೆ ಅವರು ಶಿಕ್ಷಣ, ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧವೂ ಹೋರಾಟ ನಡೆಸಿದ್ದರು ಎಂದು ಹೇಳಿದರು.
ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾದ ಸಾವಿತ್ರಿ ಬಾಪುಲೆ ಅವರಿಗೆ ಕೆಸರು ಎರಚಿರೂ ಅಂಜದೆ ಮಕ್ಕಳಿಗೆ ಅಕ್ಷರ ಕಲಿಸುವ ಮೂಲಕ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ತಮ್ಮ ಪರಿಶ್ರಮದಿಂದ ವಿವಿಧೆಡೆ ಶಾಲೆಗಳನ್ನು ಆರಂಭಿಸಿ ಅಕ್ಷರದವ್ವ ಆದರು ಎಂದು ಬಣ್ಣಿಸಿದರು.
ಮಕ್ಕಳನ್ನು ಪ್ರೋತ್ಸಾಹಿಸಲು ಶಿಷ್ಯವೇತನ ನೀಡಿದರು. ಶಾಲೆ ಬಿಟ್ಟವರನ್ನು ಮರಳಿ ಶಾಲೆಗೆ ಸೇರಿಸಿದ್ದಲ್ಲದೇ, ವಯಸ್ಕರಿಗಾಗಿ ರಾತ್ರಿ ಶಾಲೆಗಳನ್ನು ಆರಂಭಿಸುವ ಮೂಲಕ ಸ್ವಾತಂತ್ರೃ ಪೂರ್ವದಲ್ಲಿಯೇ ಅಕ್ಷರ ಕ್ರಾಂತಿ ಮಾಡಿದ್ದರು. ಇವರ ಈ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಬ್ರಿಟಿಷ್ ಸರ್ಕಾರವೇ ಗೌರವಿಸಿತ್ತು ಎಂದರು.
ಮಹಾನ್ ಸಾಮಾಜಿಕ ಕ್ರಾಂತಿಕಾರರಾದ ಇಂಹವರ ಜೀವನ ತಿಳಿದುಕೊಂಡು ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು. ಈ ಹಿಂದೆ ಗೋವಿಂದೇಗೌಡ ಅವರು ಶಿಕ್ಷಣ ಸಚಿವರಾಗಿದ್ದಾಗ ಮಹಿಳೆಯರಿಗೂ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ಉದ್ಯೋಗ ಕ್ರಾಂತಿ ಮಾಡಿದರು. ಹಾಗಾಗಿ ಶಿಕ್ಷಣ ಕ್ಷೇತ್ರದ ಘನತೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸರ್ಕಾರಿ ಶಾಲೆಗಳು ಎಂದದರೆ ಮೂಗು ಮುರಿಯುವ ದಿನಗಳಲ್ಲಿ ಜನರು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಅಗಿದೆ ಎಂದು ಹೇಳಿದರು.
ಕೆ.ಆರ್.ಕ್ಷೇತ್ರದಲ್ಲಿ ಈ ಹಿಂದೆ ಫಲಿತಾಂಶ ಕುಸಿದಿತ್ತು. ಹಾಗಾಗಿ ಆ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. ಶಿಕ್ಷಕಿಯರು ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ, ಒಂದು ಮಗುವಿನ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕು. ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕುಸಿಯುತ್ತಿದ್ದು, ಕೆಲವು ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಹಾಗಾಗಿ ಶಿಕ್ಷಕ ಸಂಘಗಳು ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಿದರೆ ಶಾಲೆ ಮುಚ್ಚುವ ಪರಿಸ್ಥಿತಿ ಬರುವುದಿಲ್ಲ. ಇದಕ್ಕೆ ಇಲಾಖೆಯಿಂದಲೂ ಶಿಕ್ಷಕರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾವಿತ್ರಿ ಬಾಪುಲೆ ಅವರಿಗೆ ಗೌರವ ಸಲ್ಲಿಸುವ ಕೆಲಸ ಅಗಬೇಕು. ಶೈಕ್ಷಣಿಕ ಚಟುವಟಿಕೆಗಳು, ಕಾರ್ಯಾಗಾರ ಹೆಚ್ಚು ನಡೆಸುವ ಮೂಲಕ ಮಕ್ಕಳ ಕಲಿಕಾಮಟ್ಟ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಸಾವಿತ್ರಿ ಬಾ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ಅಧ್ಯಕ್ಷೆ ಲತಾ ಎಸ್.ಮುಳ್ಳೂರ್ ಅಧ್ಯಕ್ಷತೆ ವಹಿಸಿ, ಶಿಕ್ಷಕಿಯರ ಸಂಘದ ಪದಾಧಿಕಾರಿಗಳನ್ನು ಸಭೆ, ಸಮಾರಂಭಗಳಲ್ಲಿ ಮಾನ್ಯತೆ ನೀಡಬೇಕು, ಶಿಕ್ಷಕರ ದಿನಾಚರಣೆಯಂತೆ ಸಾವಿತ್ರಿ ಬಾಪುಲೆ ಅವರ ಜನ್ಮ ದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಿ ಪ್ರಶಸ್ತಿ ನೀಡಬೇಕು, ಸಮಿತಿಗಳಿಗೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳನ್ನು ಸೇರ್ಪಡೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ನಂಜನಗೂಡು ಬಿಇಒ ಮಹೇಶ್, ಪಿರಿಯಾಪಟ್ಟಣ ಬಿಇಒ ಡಿ.ಎಸ್.ರವಿಪ್ರಸನ್ನ, ತಿ.ನರಸೀಪುರ ಬಿಇಒ ಶಿವಮೂರ್ತಿ, ಸಾವಿತ್ರಿ ಬಾಪುಲೆ ಸಂಘದ ಜಿಲ್ಲಾಧ್ಯಕ್ಷೆ ಸಿ.ಕೆ.ಸರಸ್ವತಿ, ಪ್ರಧಾನ ಕಾರ್ಯದರ್ಶಿ ಎಸ್.ಸಿ.ರೇಖಾ, ವಿವಿಧ ಪದಾಧಿಕಾರಿಗಳಾದ ಸಾರಿಕಾ ಎಸ್.ಗಂಗಾ, ಅನಸೂಯದೇವಿ, ಕಲ್ಪನಾರೆಡ್ಡಿ, ಶಾಂತಾ ಬಿರಾದಾರ, ಪ್ರಭಾವತಿ, ಹೆಮಕೊಡ್ಡಣ್ಣನವರ, ಕಲ್ಪನಾ ರವೀಂದ್ರನಾಥ್, ಎಚ್.ಕೆ.ಸುಶೀಲಾ ಇತರರು ಇದ್ದರು.

ಜಿಟಿಡಿ ಜತೆ ಸೆಲ್ಫಿಗೆ ಮುಗಿಬಿದ್ದ ಶಿಕ್ಷಕಿಯರು
ಸಾವಿತ್ರಿ ಬಾಪುಲೆ ವಿಚಾರ ಸಂಕಿರಣ ಉದ್ಘಾಟಿಸಿ ಹೊರಟು ನಿಂತ ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಸೆಲ್ಫಿಗಾಗಿ ಶಿಕ್ಷಕಿಯರು ಮುಗಿಬಿದ್ದರು.
ಕಾರ್ಯಕ್ರಮದ ಅರ್ಧದಲ್ಲಿಯೇ ಹೊರಗೆ ಹೋಗುವಾಗ ಸಭೆಯಲ್ಲಿದ್ದ ಶಿಕ್ಷಕಿಯರು ಗುಂಪು, ಗುಂಪಾಗಿ ಫೋಟೋಗಾಗಿ ದುಂಬಾಲು ಬಿದ್ದರು. ಕಾರ್ಯಕ್ರಮ ಆಯೋಜಕರು, ಸಭೆಯ ಗೌರವ ಕಾಪಾಡಿ, ಶಿಕ್ಷಕಿಯರು ಶಿಸ್ತಿನಿಂದ ಇರಬೇಕು, ಎಲ್ಲರೂ ಸಭಾಂಗಣದ ಒಳಗೆ ಬರಬೇಕು ಎಂದು ಧ್ವನಿವರ್ಧಕ ಮೂಲಕ ಹೇಳಿದ್ದು, ಶಿಕ್ಷಕಿಯರ ಕಿವಿಗೆ ಮುಟ್ಟಲಿಲ್ಲ. ಹೀಗಾಗಿ ಭಾಷಣ ಮಾಡಲು ಬಂದ ಡಿಡಿಪಿಐ ಜವರೇಗೌಡ ಅವರು, ಶಿಕ್ಷಕಿಯರು ಆಸನದಲ್ಲಿ ಕೂರುವವರೆಗೂ ವೇದಿಕೆಯಲ್ಲಿಯೇ ಕಾಯ್ದು ಬಳಿಕ ಭಾಷಣ ಮಾಡಿದರು.