ಮೈಸೂರು: ಮನುಕುಲ ಸೇರಿ ಎಲ್ಲ ಜೀವಗಳಿಗೂ ನೀರು ಅತ್ಯಮೂಲ್ಯ. ನಾವು ದಿನನಿತ್ಯ ಬಳಸುವ ನೀರಿನ ಶುದ್ಧೀಕರಣ ಮತ್ತು ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಎಂದು ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್ ಹೇಳಿದರು.
ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರಿನಿಂದ ಮಾನಸ ಗಂಗೋತ್ರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ನೀರಿನ ಸಂಪು ಹಾಗೂ ಟ್ಯಾಂಕ್‌ಗಳ ಶುದ್ಧೀಕರಣ ಸೇವಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸಂಸ್ಥೆಯಿಂದ ಎಲ್ಲ ಸದಸ್ಯರ ಸಂಪೂರ್ಣ ಸಹಕರಾದೊಂದಿಗೆ, ನಗರದ ಹಲವು ಸರ್ಕಾರಿ ಶಾಲೆಗಳಲ್ಲಿನ ಉಚಿತವಾಗಿ ಸಂಪು ಮತ್ತು ನೀರಿ ಟ್ಯಾಂಕ್ ಶುದ್ಧೀಕರಣ ಮಾಡಿ, ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆ ಕಾರ್ಯಕ್ಕೆ ಮುಂದಾಗಿದೆ ಎಂದರು.
ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ, ಗಾಳಿ, ಬೆಳಕು ಎಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯತೆ ನೀರಿಗೂ ಇದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಇಂದಿನ ದಿನಗಳಲ್ಲಿ ನಾವು ಬಳಕೆ ಮಾಡುವ ನೀರಿನಲ್ಲಿ ಶುಚಿತ್ವ ಮತ್ತು ಶುದ್ಧತೆ ಇಲ್ಲದಂತಾಗಿದೆ. ಇದರಿಂದಾಗಿ ಜನರು ಹಲವು ರೋಗಗಳಿಗೂ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮನೆ, ಶಾಲಾ, ಕಾಲೇಜಗಳಲ್ಲಿನ ಸಂಪು ಮತ್ತು ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಶುದ್ಧೀಕರಿಸಬೇಕು. ಕಾಯಿಸಿ ಆರಿಸಿದ ಬಿಸಿ ನೀರನ್ನು ಸೇವಿಸಬೇಕು. ಮಾನಸ ಗಂಗೋತ್ರಿ ಪ್ರಾಢಶಾಲೆಯಲ್ಲಿ ಇರುವ ಸಂಪು ಸುಮಾರು 50 ಸಾವಿರ ಲೀಟರ್‌ನಷ್ಟು ಸಾಮರ್ಥ್ಯ ಹೊಂದಿದ್ದು, 2 ನೀರು ಸರಬರಾಜು ಮಾಡುವ ಟ್ಯಾಂಕ್‌ಗಳಿವೆ. ಆದ್ದರಿಂದ ಇದನ್ನು ಗುರುತಿಸಿ ಸಂಪು ಮತ್ತು ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲೂ ಉಚಿತವಾಗಿ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು.
ಮಾನಸ ಗಂಗೋತ್ರಿ ಪೌಢಶಾಲೆಯ ಮುಖ್ಯ ಶಿಕ್ಷಕ ಚಿಂದೇಗೌಡ ಮಾತನಾಡಿ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತಮ್ಮ ಮನೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀರಿನ ಶುದ್ಧೀಕರಣಕ್ಕೆ ಆದ್ಯತೆ ನೀಡುವ ಮುಖಾಂತರ ಆರೋಗ್ಯದತ್ತ ಗಮನಹರಿಸಬೇಕೆಂದು ಎಂದರು.
ಕ್ಲಬ್‌ನ ಹಿರಿಯ ಸದಸ್ಯರಾದ ಶಂಭು ಹೆಗಡೆ, ನಾರಾಯಣ್‌ನಾಯಕ್, ಗೋಪಾಲಕೃಷ್ಣ ಇತರರು ಇದ್ದರು.