ಜಿಲ್ಲೆ

ಶತಾಯುಷಿಗೆ ಯಶಸ್ವಿ ಮೊಣಕಾಲು ಶಸ್ತ್ರ ಚಿಕಿತ್ಸೆ, ವಿವೇಕಾನಂದ ಆಸ್ಪತ್ರೆ ವೈದ್ಯರ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಶತಾಯುಷಿ ವ್ಯಕ್ತಿಯೊಬ್ಬರಿಗೆ ಮೊಣಕಾಲು ಬದಲಾವಣೆ ಶಸ್ತ್ರ ಚಿಕಿತ್ಸೆ ನೆರವೇರಿಸುವ ಮೂಲಕ ಅವರು ಸ್ವತಂತ್ರವಾಗಿ ಓಡಾಡುವಂತೆ ಮಾಡಲಾಗಿದೆ ಎಂದು ಇಲ್ಲಿಯ ವಿವೇಕಾನಂದ ಜನರಲ್ ಆಸ್ಪತ್ರೆಯ ವೈದ್ಯ, ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜನ್ ಡಾ. ವೀರೇಂದ್ರ ಭಸ್ಮೆ ತಿಳಿಸಿದರು.

ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಮೊಣಕಾಲಿನ ಅಸ್ಥಿರಂದತೆಯಿಂದ ಬಳಲುತ್ತಿದ್ದ ಧಾರವಾಡ ತಾಲೂಕಿನ ಅಮ್ಮಿನಬಾವಿಯ ಪೀರಸಾಬ್ ಎಂಬುವವರಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಅವರಿಗೆ ಹೊಸ ಜೀವನ ಕಲ್ಪಿಸಿದಂತಾಗಿದೆ. ಸದ್ಯ ಅವರು ತಾವಾಗಿಯೇ ಎಲ್ಲ ಕಡೆ ಓಡಾಡಿಕೊಂಡು ಸಂತೋಷದಿಂದ ಇದ್ದಾರೆ ಎಂದರು.

ಈ ವರೆಗೆ ಸುಮಾರು 300 ಮೊಣಕಾಲು ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಿದ್ದೇನೆ. ಅದರಲ್ಲಿ 80&90 ವರ್ಷವಾದವರೂ ಇದ್ದರು. ಇದೀಗ ಕುಟುಂಬದವರ ಮಾಹಿತಿ ಹಾಗೂ ಆಧಾರ್ ಕಾರ್ಡ್ ನಲ್ಲಿನ ದಾಖಲೆ ಪ್ರಕಾರ 1924ರ ಜೂನ್ 19ರಂದು ಜನಿಸಿದ ಸುಮಾರು 101 ವರ್ಷದ ಪೀರಸಾಬ್ ಅವರು ಎಲ್ಲ ರೀತಿಯಿಂದ ಫಿಟ್ ಇದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇದೊಂದು ಅಪರೂಪದ ಪ್ರಕರಣವಾಗಿದೆ. ಅಲ್ಲದೇ ಆಪರೇಶನ್ಗೆ ಅವರು ಹಾಗೂ ಅವರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದರು. ವಿಶೇಷವಾಗಿ ರೋಗಿಯ ಆತ್ಮಸ್ಥೆ$ರ್ಯ ಹೆಚ್ಚಾಗಿದ್ದರಿಂದ ಅನುಕೂಲವಾಯಿತು. ಕಳೆದ ಜನೆವರಿ 16ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ್ ಮಾತನಾಡಿ, ಆಪರೇಶನ್ ಮಾಡಬೇಕಾದರೆ ಯಾವುದೇ ರೋಗಿಯ ವಯಸ್ಸಿಗಿಂತ ಅವರ ಕಾಯಿಲೆ ಹಾಗೂ ಶಸ್ತ್ರಚಿಕಿತ್ಸೆಗೆ ಅವರ ಮನೋಭೂಮಿಕೆ ಹೇಗಿದೆ ಎಂಬುದು ಮಹತ್ವದ್ದಾಗುತ್ತದೆ. ಆಸ್ಪತ್ರೆಯಲ್ಲಿ ಯಾವುದೇ ವಯಸ್ಸಿನ ರೋಗಿ ಇರಲಿ, ಚಿಕಿತ್ಸೆಗೆ ಅವರ ಸ್ಪಂದನೆ ನೋಡಿಕೊಂಡು ಆಪರೇಶನ್ ಗೆ ಸೂಚಿಸಲಾಗುತ್ತದೆ. ವೈದ್ಯಕಿಯ ರಂಗ ಬಹಳಷ್ಟು ಸುಧಾರಣೆಯಾಗಿದೆ ಎಂದರು.

ತಂದೆಗೆ ನೂರು ವರ್ಷ ತುಂಬಿದೆ. ಸ್ವತಃ ಓಡಾಡಲು ಸಾಧ್ಯವಾಗದೇ ಪರಾವಲಂಬಿಯಾಗಿದ್ದರು. ವಿವೇಕಾನಂದ ಆಸ್ಪತ್ರೆಯಲ್ಲಿ ತೋರಿಸಿದಾಗ ಚಿಕಿತ್ಸೆ ನೀಡಿದರು. ಆದರೂ ನೋವು ಇದ್ದಿದ್ದರಿಂದ ಆಪರೇಶನ್ ಮಾಡಬೇಕೆಂದರು. ಕುಟುಂಬದ ನಾವೆಲ್ಲರೂ ಒಪ್ಪಿಗೆ ಸೂಚಿಸಿದೇವು. ಇದೀಗ ಶಸ್ತ್ರಚಿಕಿತ್ಸೆ ನಂತರ ಸುಧಾರಣೆಯಾಗಿದೆ. ಇದರಿಂದ ನಮಗೆಲ್ಲ ಖುಷಿಯಾಗಿದೆ ಎಂದು ಪೀರಸಾಬ್ ಅವರ ಪುತ್ರ ರಾಜಾಭಕ್ಷ ತಿಳಿಸಿದರು.

ಡಾ. ಪ್ರಶಾಂತ ಕೆ, ಡಾ. ಮೃತ್ಯುಂಜಯ, ಡಾ. ರಾವೇಂದ್ರ ಭೋಸಲೆ, ಡಾ. ಬಾಲಕೃಷ್ಣ ತೆಲಿ, ಆಸ್ಪತ್ರೆ ಸಿಇಒ ರಾಹುಲ್ ಎಂ. ಹಾಗೂ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯಕಿಯ ತಂಡದವರು ಉಪಸ್ಥಿತರಿದ್ದರು.