ಜಿಲ್ಲೆ

ಮೊಣಕಾಲು ಬೆನ್ನುಮೂಳೆ ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಹಾಗೂ ಅಹಮದಾಬಾದನ ವಿಜಯ ಶಾಲ್ಬಿ ಹಾಸ್ಪಿಟಲ್ ಸಹಯೋಗದಲ್ಲಿ ಮೊಣಕಾಲು ಮತ್ತು ಬೆನ್ನು ಮೂಳೆ ತಪಾಸಣೆ ಉಚಿತ ಶಿಬಿರವನ್ನು ದೇಶಪಾಂಡೆನಗರದ ರೋಟರಿ ಶಾಲೆಯಲ್ಲಿ ಆ. 20ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಕ್ರಮ ಶಾಹ ಮತ್ತು ತಂಡದವರು ರೋಗಿಗಳ ತಪಾಸಣೆ ನಡೆಸುವರು. ಶಿಬಿರಕ್ಕೆ ಬರುವವರು ಎಕ್ಸ್ರೇ ಹಾಗೂ ಮೆಡಿಕಲ್ ರಿಪೋರ್ಟ್ ತೆಗೆದುಕೊಂಡು ಬರಬೇಕು. ಇದರಿಂದ ರೋಗಿಯ ಹಿನ್ನೆಲೆ ತಿಳಿದು ಚಿಕಿತ್ಸೆ ನೀಡಲು ತಜ್ಞರಿಗೆ ಅನುಕೂಲವಾಗುವುದು ಎಂದರು.

2020ರಿಂದ ಇಂತಹ ಶಿಬಿರಗಳನ್ನು ನಗರದಲ್ಲಿ ಆಯೋಜಿಸುತ್ತ ಬರಲಾಗಿದೆ. ಪ್ರತಿ ಬಾರಿ 350ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಕೆಲವರಿಗೆ ಮೊಣಕಾಲು ಬದಲಾವಣೆ ಹಾಗೂ ಶಸ್ತ್ರ ಚಿಕಿತ್ಸೆಯ ಅಗತ್ಯತೆ ಇರುವುದು ಕಂಡು ಬರುತ್ತಿದೆ. ಈ ಬಾರಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗುವ ರೋಗಿಗಳಿಗೆ ಅಹಮದಾಬಾದನಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಆಥಿರ್ಕ ದುರ್ಬಲರಿಗೆ ಕಡಿಮೆ ದರದಲ್ಲಿ ಮಾಡಿಸಲಾಗುವುದು ಎಂದರು.

ಫಿಜಿಯೋಥೆರಪಿ, ಮೆಡಿಸಿನ್ ಅಗತ್ಯ ಇರುವವರಿಗೆ ನೀಡಲಾಗುವುದು. ಆ. 19ರಂದು ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿಯೂ ಇಂತಹ ಶಿಬಿರ ನಡೆಯಲಿದೆ. ಎರಡು ದಿನದ ಶಿಬಿರವನ್ನು ಡಾ. ವಿಕ್ರಮ ಶಾಹ ತಂಡದವರು ನಡೆಸಿಕೊಡುವರು. ಆಸಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಕುಬಸದ ಅವರು ಮನವಿ ಮಾಡಿದರು.

ಸುರೇಂದ್ರ ಪೋರವಾಲ್, ಸಿದ್ದೇಶ್ವರ ಕಮ್ಮಾರ, ವಿದ್ಯಾಧರ, ಮೋಹನ ಠಕ್ಕರ ಇದ್ದರು.