ಜಿಲ್ಲೆ

ಪಾಲಿಕೆ ಸಭೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯರ ಪುಂಡಾಟ!

- ಕನ್ನಡ ವಿರೋಧಿ ಸದಸ್ಯರ ಸದಸ್ಯತ್ವ ರದ್ದತಿಗೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಲ್ಲಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಬೆಂಬಲಿತ ಸದಸ್ಯರ ಕನ್ನಡ ವಿರೋಧಿ ನಡೆಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಘಟನೆ‌ ನಡೆಯಿತು.

ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಎಂಇಎಸ್ ಬೆಂಬಲಿತ ಸದಸ್ಯರು ಕನ್ನಡ ಕಡ್ಡಾಯ ಕೈಬಿಡಬೇಕು. ಮರಾಠಿಯಲ್ಲಿಯೇ ದಾಖಲೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.‌ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತರೂಢ ಬಿಜೆಪಿ, ವಿರೋಧ ಪಕ್ಷ‌ ಕಾಂಗ್ರೆಸ್ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಆಡಳಿತ ಭಾಷೆ ಕನ್ನಡ ಆಗಿದ್ದರಿಂದ ಎಲ್ಲವೂ ಕನ್ನಡದಲ್ಲಿ ಇರಬೇಕು ಎಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಆರಂಭವಾಗುತ್ತಿದ್ದಂತೆ ಮೇಯರ್ ಮಂಗೇಶ ಪವಾರ ಸಭೆಯನ್ನು ಐದು ನಿಮಿಷ‌ ಮುಂದೂಡಿದರು.

ಕನ್ನಡ‌ಕ್ಕೆ ವಿರೋಧಿಸುವವರು‌ ಮತ್ತು‌ ಕನ್ನಡ ಭಾಷೆ ಕಲಿಯಲು ನಿರಾಕರಿಸುವವರು ಹಾಗೂ ನಾಡ ವಿರೋಧಿಯಾಗಿ ನಡೆದುಕೊಳ್ಳುವವ ಸದಸ್ಯರ ಸದಸ್ಯತ್ವ ರದ್ದು ಪಡಿಸಬೇಕು. ಮರಾಠಿ ದಾಖಲೆ ಬೇಕು ಎನ್ನುವವರು ಮಹಾರಾಷ್ಡ್ರಕ್ಕೆ ಹೋಗಲಿ ಎಂದು ಎಂದು ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಆಗ್ರಹಿಸಿದರು.