ಹುಬ್ಬಳ್ಳಿ: ಜೀರೋ ಡಿಫೆಕ್ಟ್ ಹಾಗೂ ಇಫೆಕ್ಟ್ ಇರುವಂತಹ ವಸ್ತುಗಳನ್ನು ಉತ್ಪಾದಿಸುವತ್ತ ಎಲ್ಲ ಉದ್ಯಮದಾರರು ಗಮನ ಹರಿಸಬೇಕು, ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆ ಮತ್ತು ಬೆಲೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ಕೈಗಾರಿಕಾ ವಸಾಹತುವಿನಲ್ಲಿ ಶನಿವಾರ ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರೀಸರ್ಚ್ ಸೆಂಟರ್ (ಕೆಎಂಟಿಆರ್ ಸಿ) ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ದೋಷ ಹಾಗೂ ಪರಿಸರದ ಮೇಲೆ ಹಾನಿ ಉಂಟು ಮಾಡದಂತೆ ವಸ್ತುಗಳನ್ನು ಉತ್ಪಾದನೆ ಮಾಡಿದಾಗ ವಿಶ್ವದಲ್ಲಿ ದೇಶದ ಉತ್ಪಾದನೆಗಳಿಗೆ ಹೆಚ್ಚು ಬೆಲೆ ಬರುತ್ತದೆ ಎಂದರು.
ದೇಶದಲ್ಲಿ ವಸ್ತುಗಳ ಪರೀಕ್ಷೆ ಮಾಡುವ ಪ್ರಯೋಗಾಲಯಗಳಿಗೆ ಎನ್ಎಬಿಎಲ್ ಪ್ರಮಾಣ ಪತ್ರ ಸಿಗುವುದು ಅಷ್ಟೊಂದು ಸುಲಭವಲ್ಲ. ಆದರೆ, ಹುಬ್ಬಳ್ಳಿಯ ಕೆಎಂಟಿಆರ್ ಸಿಗೆ ಸಿಕ್ಕಿದೆ. ಇದನ್ನು ಅತ್ಯುತ್ತಮವಾಗಿ ಬಳಸಿಕೊಂಡು ಸರಿಯಾಗಿ ಮಾರ್ಕೆಟಿಂಗ್ ಮಾಡಬೇಕು. ಆ ಮೂಲಕ ಸ್ವಂತ ಬಲದ ಮೇಲೆ ಸಂಸ್ಥೆಯು ಕಾರ್ಯಾಚರಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ 17 ಸಾವಿರ ಉತ್ಪಾದನೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಉತ್ಪಾದನೆ ಮಾಡಲಾಗಿದೆ. ಇದರಿಂದ ದೇಶದ ರಫ್ತು ಸಾಮರ್ಥ್ಯ ಹೆಚ್ಚಾಗಲಿದೆ. ಸ್ಕಿಲ್, ಸ್ಕೇಲ್ ಮತ್ತು ಸ್ಪೀಡ್ ಮೂರು ಎಸ್ ಗಳು ಇಂದಿನ ಅವಶ್ಯಕವಾಗಿವೆ ಎಂದರು.
ಅತಿಥಿಯಾಗಿದ್ದ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕೈಗಾರಿಕೆಗಳು ಬೆಳೆಯಬೇಕಾದರೆ ಪ್ರಯೋಗಾಲಯಗಳು ಸಾಮಾನ್ಯ ಸೌಲಭ್ಯಗಳಾಗಿ ಇರಬೇಕಾಗುತ್ತದೆ. ಇಂತಹ ಲ್ಯಾಬ್ಗಳು ಇದ್ದರೆ ಗುಣಮಟ್ಟದ ಉತ್ಪನ್ನ ತಯಾರಿಸಲು ಸಾಧ್ಯ. ಈ ಭಾಗದ ಉದ್ಯಮಿಗಳ ಬಹುದಿನದ ಬೇಡಿಕೆ ಇದೀಗ ಈಡೇರಿದೆ. ಆಧುನಿಕ ಕಟ್ಟಡ ಹಾಗೂ ಉಪಕರಣಗಳನ್ನು ಒದಗಿಸಲಾಗಿದೆ ಎಂದರು.
ನಾನು ಸಿಎಂ ಇದ್ದಾಗ 184 ಐಟಿಐ ಅಪ್ ಗ್ರೇಡ್ ಮಾಡಲಾಯಿತು. ವೀಕ್ಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ 84 ಐಟಿಐ ಅಪ್ ಗ್ರೇಡ್ ಆಗಬೇಕಾಗಿತ್ತು. ಸರ್ಕಾರಗಳು ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದರು.
ಕಾಶಿಯಾ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಮಾತನಾಡಿ, 20 ಕೋಟಿ ರೂ. ವೆಚ್ಚದಲ್ಲಿ ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುದಾನ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕೆಎಂಟಿಆರ್ ಸಿ ಮಾಜಿ ಅಧ್ಯಕ್ಷರಾದ ಸಿ.ಬಿ. ಪಾಟೀಲ, ಎಂ.ಎಸ್. ಬಿಡಸಾರಿಯಾ, ಎಂ.ಜಿ. ಸಾಲಿಮಠ, ಬಿ.ಡಿ. ಕಡಬಿ, ಲಕ್ಷ್ಮಿಕಾಂತ ಪಾಟೀಲ, ನಾಗರಾಜ ದಿವಟೆ ಅವರನ್ನು ಸನ್ಮಾನಿಸಲಾಯಿತು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಶಿವರಾಮ ಹೆಗಡೆ, ವಿಜಯ ಅಂಗಡಿಕಿ, ಎಂ.ವಿ. ಕರಮರಿ, ಡಾ. ವಿ.ಎಸ್.ವಿ ಪ್ರಸಾದ, ಮಹೇಂದ್ರ ವಿಕಮಶಿ, ರಮೇಶ ಪಾಟೀಲ, ಎನ್.ಎ. ಚರಂತಿಮಠ, ಇತರರು ಇದ್ದರು.
ಜಯಪ್ರಕಾಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಕೆಎಂಟಿಆರ್ ಸಿ ಅಧ್ಯಕ್ಷ ಎಂ.ಕೆ. ಪಾಟೀಲ ಸ್ವಾಗತಿಸಿದರು. ನರೇಂದ್ರ ಕುಲಕರ್ಣಿ ನಿರೂಪಿಸಿದರು. ಮಲ್ಲೇಶ ಜಾಡರ ವಂದಿಸಿದರು.