ಜಿಲ್ಲೆ

'ಹತ್ತರ ಜತೆ 11 ಅಮೂಲ್; ನಂದಿನಿಗೆ ಸ್ಪರ್ಧೆಯೇ ಅಲ್ಲ, 45-50 ಲಕ್ಷ ಮತಕ್ಕಾಗಿ ಅಪಪ್ರಚಾರ' ಎಂದ<br>ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಕರ್ನಾಟಕ ಹಾಲು ಉತ್ಪಾದನಾ ಮಂಡಳಿ(ಕೆಎಂಎಫ್)ಯೊಂದಿಗೆ ಇರುವ ಕೋಟ್ಯಂತರ ರೈತರು, ಹಾಲು ಉತ್ಪಾದಕರು ಹಾಗೂ ಗ್ರಾಹಕರಿಗೆ ಅನ್ಯಾಯವಾಗಲು ಯಾವುತ್ತೂ ಬಿಡುವುದಿಲ್ಲ. ಈಗಾಗಲೇ ನಂದಿನಿ ಉತ್ಪನ್ನಗಳ ಜತೆ ಹತ್ತು ಕಂಪನಿಗಳು ಸ್ಪರ್ಧಿಸುತ್ತಿದ್ದು, ಅಮೂಲ್ ಹತ್ತರ ಜತೆಗೆ ಹನ್ನೊಂದು ಅಷ್ಟೇ. ಯಾವುದೇ ಕಾರಣಕ್ಕೂ ವಿಲೀನ ಮಾಡಲಾಗುವುದಿಲ್ಲ. ರಾಜ್ಯದ ಜನ ಭರವಸೆ ಕಳೆದುಕೊಳ್ಳಬಾರದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೆಎಂಎಫ್ ವಾರ್ಷಿಕವಾಗಿ 22 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದ್ದು, ಕನ್ನಡಿಗರ ಹೆಮ್ಮೆಯಾಗಿರುವ ಕೆಎಂಎಫ್ 200 ಕೋಟಿ ಲಾಭಾಂಶದೊಂದಿಗೆ ಸಂಸ್ಥೆ ಅಭಿವೃದ್ಧಿ ಸಾಧಿಸುತ್ತಿದ್ದರೂ ಕೇಂದ್ರ ಸರ್ಕಾರದಿಂದ ಅಂಥಹ ಪ್ರಸ್ತಾವನೆ ಬಂದರೆ ಮುಲಾಜಿಲ್ಲದೇ ತಿರಸ್ಕಾರ ಮಾಡಿ ರೈತ ಹಿತಕಾಯಲಾಗುವುದು. ರಾಜ್ಯದ ಜನತೆ ಯಾವುದೇ ಕಾರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕರ್ನಾಟಕ ಸಹಕಾರ ಹಾಲು ಉತ್ಪಾದನಾ ಮಹಾಮಂಡಳವು 1983 ರಲ್ಲಿ ಸ್ಥಾಪಿತವಾದ ರಾಜ್ಯ ಮಟ್ಟದ ಡೈರಿ ಸಹಕಾರ ಸಂಸ್ಥೆಯಾಗಿದ್ದು, ಇದು ರೈತರ ಕಲ್ಯಾಣಕ್ಕಾಗಿ ರೈತರಿಂದ ನಿರ್ವಹಿಸಲ್ಪಡುವ ರೈತರಿಗಾಗಿಯೇ ಮೀಸಲಾಗಿದೆ. ಇದನ್ನು ಬೆಳೆಸುವುದರ ಜತೆಗೆ ರಾಜ್ಯ ರೈತರ ಹಾಗೂ ಗ್ರಾಹಕರ ಹೆಮ್ಮೆಯ ಉತ್ಪನ್ನಗಳ ಸಂಸ್ಥೆಯಾಗಿ ಕಾಪಾಡುವುದು ಗೊತ್ತಿದೆ. ಇಲ್ಲಿನ ಆಡಳಿತ ಮಂಡಳಿಯೇ ಸುಪ್ರೀಂ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ರಾಜ್ಯದ 24,068 ಹಳ್ಳಿಗಳನ್ನು ಒಳಗೊಂಡು 15,200 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 26 ಲಕ್ಷ ರೈತ ಸದಸ್ಯರನ್ನು ಹಾಗೂ 15 ಜಿಲ್ಲಾ ಹಾಲು ಒಕ್ಕೂಟಗಳನ್ನು ಹೊಂದಿದೆ. ಹೈನುಗಾರರು, ರೈತರು ಸೇರಿದಂತೆ  ಲಕ್ಷಾಂತರ ಕೆಎಂಎಫ್ ಕುಟುಂಬದಲ್ಲಿ  45 ರಿಂದ 50 ಲಕ್ಷ ಮತದಾರರಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇವರನ್ನು ಬಿಜೆಪಿ ಸರ್ಕಾರದ ವಿರುದ್ಧ ಒಕ್ಕಲೆಬ್ಬಿಸಿ ರಾಜಕೀಯ ಲಾಭ ಪಡೆಯುವುದಕ್ಕಾಗಿಯೇ ಅಮೂಲ್ ಜತೆ ನಂದಿನಿ ಉತ್ಪನ್ನ ವಿಲೀನಗೊಳಿಸಲಾಗುತ್ತಿದೆ ಎಂದು ಊಹಾಪೋಹ ಹಬ್ಬಿಸಲಾಗುತ್ತಿದೆ’ ಎಂದೆನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಭಿವೃದ್ಧಿ ಜತೆಗೆ ರೈತರ ಅಭ್ಯುದಯ:
ರಾಜ್ಯದಲ್ಲಿ ಕಳೆದ ಹಲವು ದಶಕಗಳಿಂದ ರೈತರ, ಹೈನುಗಾರರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ 5 ವರ್ಷಗಳಿಂದ ನಂದಿನಿ ಹಾಲು ಸಂಗ್ರಹಣೆ ಮತ್ತು ಮಾರಾಟ(2018 ರಿಂದ 2023 ರವರೆಗೆ) ದಿನಕ್ಕೆ 3000 ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಪ್ರಾರಂಭವಾದ ಒಕ್ಕೂಟವು 2021 ರಲ್ಲಿ ದಿನಕ್ಕೆ 94 ಲಕ್ಷ ಲೀಟರ್ ಹಾಲು ಸಂಗ್ರಹಣೆವರೆಗೆ ತಲುಪಿದೆ. ಇದು ಅಗಾಧ  ಬೆಳವಣಿಗೆ ತೋರಿಸುತ್ತದೆ ಎಂದರು.
ಡೈರಿ ಉದ್ಯಮದಲ್ಲಿ ಸುಗ್ಗಿ ಮತ್ತು ಬೇಸಿಗೆ ಎಂಬ 2 ಋತುಮಾನಗಳಿರುತ್ತವೆ ಮತ್ತು ಸಂಗ್ರಹಣೆಯಲ್ಲಿ ವ್ಯತ್ಯಯವಾಗುತ್ತಿರುತ್ತದೆ. 2018-19 ರಲ್ಲಿ ಪ್ರತಿ ದಿನ ಹಾಲು ಸಂಗ್ರಹಣೆಯು 74.79 ಲಕ್ಷ ಲೀಟರ್‌ನಷ್ಟಿದ್ದು, ಪ್ರಸ್ತುತ 2022-23 ರಲ್ಲಿ ಪ್ರತಿ ದಿನ 80.27 ಲಕ್ಷ ಲೀಟರ್ ಹಾಲು ಸಂಗ್ರಹಣೆಯಿದ್ದು, ಶೇಕಡ 9ರಷ್ಟು ಬೆಳವಣಿಗೆ ಸಾಧಿಸಿದೆ. 2018-19 ರಲ್ಲಿ ಹಾಲಿನ ಮಾರಾಟವು ದಿನಕ್ಕೆ 34.87 ಲಕ್ಷ ಲೀಟರ್‌ಯಿದ್ದು, ಪ್ರಸ್ತುತ ದಿನಕ್ಕೆ 43.03 ಲಕ್ಷ ಲೀಟರ್ ಮಾರಾಟವಾಗುತ್ತಿದ್ದು, ಶೇಕಡ 23 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ರ ಅ 2018-19 ರಲ್ಲಿ ಮೊಸರು ಮಾರಾಟವು ದಿನಕ್ಕೆ 4.76 ಕೆ.ಜಿಗಳಷ್ಟು ಮತ್ತು ಪ್ರಸ್ತುತ ದಿನಕ್ಕೆ 8.00 ಲಕ್ಷ ಕೆ.ಜಿ ಗಳಷ್ಟು ಮಾರಾಟವಾಗುತ್ತಿದ್ದು, ಶೇಕಡ 60ರಷ್ಟು ಬೆಳವಣಿಗೆ ಹೊಂದಿದೆ ಎಂದು ಬಾಲಚಂದ್ರ ಚಾರಕಿಹೊಳಿ ಮಾಹಿತಿ ನೀಡಿದರು.
ಹಾಲು ಮತ್ತು ಉತ್ಪನ್ನಗಳ ಮಾರಾಟದಿಂದ ಬಂದ ಆದಾಯದಲ್ಲಿ 80 ಪೈಸೆಯನ್ನು ರೈತರಿಗೆ ಮರಳಿ ನೀಡಲಾಗುತ್ತಿದೆ. ಅಲ್ಲದೇ, ನೌಕರರಿಗೆ ನಿವೃತ್ತಿ ವೇತನ ನೀಡುವುದರ ಜತೆಗೆ ವಿದ್ಯುತ್ ಬಿಲ್‌ಗಾಗಿಯೇ ಪ್ರತಿ ವರ್ಷ 120 ಕೋಟರಿ ರೂ.ಇಂಧನ ಇಲಾಖೆಗೆ ಪಾವತಿಸಲಾಗುತ್ತಿದೆ. ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡರೆ 40 ಕೋಟಿ ರೂ.ಉಳಿತಾಯವಾಗಲಿದ್ದು, ಈ ಬಗ್ಗೆ ಚಿಂತನೆ ನಡೆದಿದೆ.  ಪ್ರತಿ ದಿನ ಹೈನುಗಾರ ರೈತರಿಗೆ ಹಾಲು ಶೇಖರಣೆ ಮೊತ್ತ ಒಟ್ಟು ರೂ.28 ಕೋಟಿಗಳನ್ನು ಪಾವತಿಸಲಾಗುತ್ತಿದೆ ಎಂದು ವಿವರಿಸಿದರು.