ತಿ.ನರಸೀಪುರ: ಗುಣಮಟ್ಟದ ಹಾಲಿಗೆ ಪ್ರೋತ್ಸಾಹ ನೀಡಿ, ಹೈನುಗಾರಿಕೆಗೆ ಉತ್ತೇಜನ ನೀಡಲು ರಾಜ್ಯದಲ್ಲಿಯೇ ಅಧಿಕ ಬೆಲೆ ನೀಡುತ್ತಿರುವ ಮೈಸೂರು ಜಿಲ್ಲಾ ಒಕ್ಕೂಟ(ಮೈಮುಲ್)ದ ರೈತಪರ ಯೋಜನೆಗಳಿಗೆ ಕೆಎಂಎಫ್‌ನಿಂದ ಹೆಚ್ಚಿನ ನೆರವು ಕಲ್ಪಿಸುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.
ತಾಲೂಕಿನ ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮಂಗಳವಾರ 13.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಒಕ್ಕೂಟದ ನೂತನ ಅಧ್ಯಕ್ಷರ ಪ್ರಸ್ತಾಪದಂತೆ ಕೆಎಂಎಫ್‌ನಲ್ಲಿ ಮೈ ಮುಲ್‌ನ ಯಾವುದೇ ಯೋಜನೆಯ ಅನುದಾನ ಬಾಕಿ ಉಳಿದಿದ್ದರೆ, ಅದರೊಂದಿಗೆ ಹೆಚ್ಚುವರಿ ಅನುದಾನ ಕೊಡಿಸುತ್ತೇನೆ ಎಂದರು.
ಗುಜರಾತ್‌ನಲ್ಲಿ ರೈತರು ಒಗ್ಗೂಡಿ ಕಟ್ಟಿದ ಅಮುಲ್ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಕೋಟಿಗಟ್ಟಲೆ ವಹಿವಾಟು ನಡೆಸುತ್ತಿವೆ. ಗುಜರಾತ್ ನಂತರ ರಾಜ್ಯದ ಹಾಲು ಒಕ್ಕೂಟದ ನಂದಿನಿ ಉತ್ಪನ್ನಗಳು ಎರಡನೇ ಸ್ಥಾನದಲ್ಲಿ ವಹಿವಾಟು ನಡೆಸುತ್ತಿವೆ. ಹೈನುಗಾರಿಕೆ ಉಪಕಸುಬಿಗೆ ಹೆಚ್ಚಿನ ನೆರವು ನೀಡಲು ಹಾಲಿಗೆ ನೀಡುತ್ತಿದ್ದ 2 ರೂ. ಪ್ರೋತ್ಸಾಹ ಧನವನ್ನು ನಮ್ಮ ಸರ್ಕಾರವಿದ್ದಾಗ ಏರಿಕೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಪ್ರೋತ್ಸಾಹ ಧನ ಹೆಚ್ಚಿಸಲಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಚಲುವರಾಜು ಮಾತನಾಡಿ, ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 8.50 ಲಕ್ಷ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯವೂ 9.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 3.50 ರಿಂದ 4 ಲಕ್ಷ ಲೀಟರ್ ಹಾಲು ಮತ್ತು ಉತ್ಪನ್ನಗಳು ಮಾರಾಟವಾಗುತ್ತಿವೆ. ಇನ್ನುಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡಲು ಸಂಗ್ರಹಿಸಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಳೇ ಕೆಂಪಯ್ಯನಹುಂಡಿ ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು, ಅಹವಾಲು ಸಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮುಗಿಬಿದ್ದರು. ಹಾಲು ಒಕ್ಕೂಟದ ನಿರ್ದೇಶಕರಾದ ಸಿ.ಓಂ ಪ್ರಕಾಶ್, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಈ ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಮಹದೇವಣ್ಣ, ಜಿಪಂ ಮಾಜಿ ಸದಸ್ಯರಾದ ಕೆ.ಮಹದೇವ, ಎಂ.ಸುಧಾ ಮಹದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಗ್ರಾಪಂ ಅಧ್ಯಕ್ಷೆ ನಂದಿನಿ, ಮಾಜಿ ಅಧ್ಯಕ್ಷ ಆನಂದ, ವಿಸ್ತರಣಾಧಿಕಾರಿ ಆರ್.ಪ್ರಮೋದ್, ಉಪಾಧ್ಯಕ್ಷ ಎಸ್.ಕುಮಾರ್, ನಿರ್ದೇಶಕರಾದ ಕೆ.ಎಂ.ನಾಗೇಶ್, ಕೆ.ರಘು, ರಾಚನಾಯಕ, ಶಾರದಮ್ಮ, ಕೆ.ಪಿ.ಸುರೇಶ್, ಹೊಂಬಾಳಮ್ಮ, ಪುಟ್ಟಮ್ಮ, ಸಿದ್ದಪ್ಪ, ಕೆ.ಕೃಷ್ಣೇಗೌಡ, ಶಿವಮೂರ್ತಿ, ಡೇರಿ ಕಾರ್ಯದರ್ಶಿ ಕೆ. ಮಂಜುಳಾ, ಹಾಲು ಪರೀಕ್ಷಕ ವಿನೋದ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ತುಂಬಲ ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎನ್.ಸೋಮು, ಸದಸ್ಯ ಬಾದಾಮಿ ಮಂಜು, ವಸಂತಾ ಶ್ರೀಕಂಠ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ರಮೇಶ್, ಪುರಸಭಾ ಮಾಜಿ ಸದಸ್ಯ ಕೆ.ಗಣೇಶ್, ಎಂ.ಮಿಥುನ್, ಕುರುಬರ ಸಂಘದ ನಿರ್ದೇಶಕ ಅರುಣ್ ಕುಮಾರ್, ಗುತ್ತಿಗೆದಾರ ಮಾಧು, ರಜತ್‌ಸ್ವಾಮಿ, ಮುಖಂಡರಾದ ತುಂಬಲ ಮಂಜುನಾಥ್, ಅಂದಾನಿ, ಕಾಂತರಾಜು, ಮಲ್ಲೇಶ್, ಹಾಳೇಗೌಡ ಇದ್ದರು.