ಹುಬ್ಬಳ್ಳಿ: ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ಸಂಸ್ಥೆಯ (ಕೆಎಂಇಆರ್ ಸಿ) ಅಧ್ಯಕ್ಷರಾಗಿರುವ ಶಾಲಿನಿ ರಜನೀಶ್ ಅವರನ್ನು ಬದಲಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಇಆರ್ಸಿಯು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಸ್ವಿತ್ವಕ್ಕೆ ಬಂದಿರುವ ಸರ್ಕಾರದ ಕಂಪನಿಯಾಗಿದೆ. ಇದು ಅಕ್ರಮ ಗಣಿಗಾರಿಕೆ ನಡೆದ ಪ್ರದೇಶದಲ್ಲಿ ಪರಿಸರ ಪುನಶ್ಚೇತನ ಹಾಗೂ ಜನರ ಜೀವನ ಪುನರುಜ್ಜೀವನಕ್ಕೆ ಸಂಬಂಧಿಸಿದ (ಕಾಂಪ್ರಹೆನ್ಸಿವ್ ಎನ್ವಿರಾನಮೆಂಟ್ ಪ್ಲಾನ್ ಫಾರ್ ಮೈನಿಂಗ್ ಇಂಪ್ಯಾಕ್ಟ್ ಜೋನ್ &ಸಿಎಂಪಿಎಂಐಜೆಡ್) ಯೋಜನೆಗಳನ್ನು ಮಾನಿಟರಿಂಗ್ ಸಮಿತಿ ಮೂಲಕ ಗಣಿ ಕಂಪನಿಗಳಿಂದ ಟನ್ ಕಬ್ಬಿಣ ಅದಿರಿಗೆ ಶೇ. 10ರಂತೆ ಸಂಗ್ರಹಿಸಲಾಗಿರುವ 25 ಸಾವಿರ ಕೋಟಿ ರೂ. ಯೋಜನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.
ಈ ನಿಧಿಯು ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಪ್ರದೇಶ ಬಿಟ್ಟು ಬೇರೆಡೆಗೆ ವರ್ಗಾವಣೆಯಾಗುತ್ತಿರುವುದು ಹಾಗೂ ಈಗಾಗಲೇ ಗಣಿಗಾರಿಕೆಯಿಂದ ಪ್ರಭಾವಿತ ಎಂದು ಗುರುತಿಸಿರುವ ಹಳ್ಳಿಗಳಲ್ಲದೇ ಬೇರೆ ಗ್ರಾಮಗಳನ್ನು ಸೇರಿಸುವ ಹುನ್ನಾರ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಇಂತಹ ಕೆಲಸಗಳಿಂದ ಕೆಎಂಇಆರ್ಸಿ ಉದ್ದೇಶ ಈಡೇರುವುದಿಲ್ಲ. ಬಳ್ಳಾರಿ, ವಿಜಯನಗರ ಸೇರಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ 283 ಹಳ್ಳಿಗಳನ್ನು ಅಕ್ರಮ ಗಣಿಗಾರಿಕೆಯಿಂದ ಹಾನಿಗೀಡಾದ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿ ಮಾತ್ರ ಈ ಹಣ ಬಳಕೆಯಾಗಬೇಕು ಎಂದರು.
ಈ ಪ್ರದೇಶದಲ್ಲಿ ಪರಿಸರ ಹಾಗೂ ಜನಜೀವನ ಪುನರುಜ್ಜೀವನಗೊಳ್ಳಬೇಕು. ಅಕ್ರಮ ಗಣಿಗಾರಿಕೆಯಿಂದ ಗಾಳಿ, ನೀರು, ಕೃಷಿ ಭೂಮಿ ಮಾಲಿನ್ಯವಾಗಿದೆ. ಪಶು ಸಂಗೋಪನೆಗೆ ಹೊಡೆತ ಬಿದ್ದಿದೆ. ಈ ನಿಧಿಯು ನ್ಯಾಯೋಚಿತವಾಗಿ ಅರ್ಹರಿಗೆ ತಲುಪಬೇಕು. ಇದಕ್ಕಾಗಿ ಅವಸರ ಬೇಡ, ಅಧ್ಯಯನ ಮಾಡಿ ವೆಚ್ಚ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಹಿರೇಮಠ ಆಗ್ರಹಿಸಿದರು.
ಲಕ್ಷ$್ಮಣ ಬಕ್ಕಾಯಿ, ಶಮೀ ಅಹ್ಮದ ಮುಲ್ಲಾ ಗೋಷ್ಠಿಯಲ್ಲಿದ್ದರು.