ಕೆ.ಎಂ.ದೊಡ್ಡಿ: ದೇವಾಲಯಗಳು ನೆಮ್ಮದಿ ನೀಡುವ ಕೇಂದ್ರಗಳಾಗಲಿ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಸಮೀಪದ ಬೊಮ್ಮನದೊಡ್ಡಿ ಗ್ರಾಮದಲ್ಲಿ ಸೋಮವಾರ ಶ್ರೀ ಮಾರಮ್ಮ ದೇವಾಲಯವನ್ನುಸೇವೆಗೆ ಸಮರ್ಪಣೆ ಮಾಡಿದ ಸಂದರ್ಭ ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಷ್ಟೇ ಒತ್ತಡವಿದ್ದರೂ ಒಂದು ಬಾರಿ ದೇವಾಲಯಕ್ಕೆ ಹೋಗಿ ಕೆಲ ನಿಮಿಷ ಅಲ್ಲಿ ಇದ್ದು ಬಂದರೆ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ ಎಂದರು. ಸಮಾಜದಲ್ಲಿ ಧರ್ಮ ಎಂದಿಗೂ ಉಳಿಯುತ್ತದೆ. ಅಧರ್ಮ ತಾತ್ಕಾಲಿಕವಾಗಿ ಮಾತ್ರ ಇರುತ್ತದೆ. ಅಧರ್ಮದ ಹಿಂದೆ ಹೋದರೆ ನಮಗೆ ಅಶಾಂತಿ ಖಚಿತ. ಜೀವನವೇ ಡೋಲಾಯಮಾನವಾಗುತ್ತದೆ. ಈ ಎಚ್ಚರ ಎಲ್ಲರಿಗೂ ಇರಬೇಕು ಎಂದರು. ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜ, ದೇಶ ಸರಿದಾರಿಯಲ್ಲಿ ಸಾಗುತ್ತದೆ. ಕೆಟ್ಟ ಆಲೋಚನೆಗಳನ್ನು ಬಿಟ್ಟು ನಾವು ಉಪಕಾರಿಗಳಾಗಬೇಕು. ಸಾಮಾಜಿಕ ಕಾರ್ಯಗಳತ್ತ ಚಿತ್ತ ಹರಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದರು.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ: ಹಳ್ಳಿಗಾಡಿನ ಜನ ಮುಗ್ಧರು. ಮದುವೆ ಇತ್ಯಾದಿ ಕಾರ್ಯಕ್ಕೆ ದುಂದು ವೆಚ್ಚ, ಆಡಂಬರ ಮಾಡುವುದು ಹೆಚ್ಚಾಗಿದೆ. ಸರಳ ವಿವಾಹಕ್ಕೆ ಆದ್ಯತೆ ನೀಡಿ. ಆರ್ಥಿಕ ಹೊರೆ ತಪ್ಪಿಸಿಕೊಳ್ಳಿ. ಜೀವನದ ಮೌಲ್ಯಗಳಿಗೆ, ಸುಖ ದಾಂಪತ್ಯ ಮತ್ತು ಒಟ್ಟು ಕುಟುಂಬ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಲು ಮುಂದಾಗಿ ಎಂದವರು ಕರೆ ನೀಡಿದರು.