ಜಿಲ್ಲೆ

ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯ ಉದ್ಘಾಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಿಶ್ವ ಹಿಮೋಫಿಲಿಯಾ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹಾಗೂ ಹಿಮೋಫಿಲಿಯಾ ಸೊಸೈಟಿ - ಸಹಯೋಗದೊಂದಿಗೆ ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯವನ್ನು ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜ್ಯೋತ್ಸಾ ಉದ್ಘಾಟಿಸಿದರು.

ರಕ್ತಸ್ರಾವದ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮಹಿಳೆಯರು ಮತ್ತು ಹುಡುಗಿಯರಿಗೆ ಸಮಗ್ರ ಆರೋಗ್ಯ ರಕ್ಷಣೆಯ ಅಗತ್ಯವಿದೆ. ರಕ್ತಸ್ರಾವ ಅಸ್ವಸ್ಥತೆಯ ರೋಗಿಗಳಿಗೆ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಇಂತಹ ಚಿಕಿತ್ಸಾಲಯಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಮಾತನಾಡಿ, ತಿಂಗಳ ಪ್ರತಿ 2ನೇ ಶನಿವಾರ ಕ್ಲಿನಿಕ್​ ಕಾರ್ಯನಿರ್ವಹಿಸುತ್ತದೆ. ಮಹಿಳಾ ವೈದ್ಯ ಸಿಬ್ಬಂದಿಯನ್ನು ಒಳಗೊಂಡ ಈ ಕ್ಲಿನಿಕ್​ನಲ್ಲಿ ರಕ್ತಸ್ರಾವದ ಅಸ್ವಸ್ಥತೆ ಹೊಂದಿರುವ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಸಮಗ್ರ ಆರೈಕೆ ಮಾಡುವ ಗುರಿಹೊಂದಲಾಗಿದೆ ಎಂದರು.

ಕೆಎಂಸಿ ಮಣಿಪಾಲದ ಅಸೋಸಿಯೇಟ್​ ಡೀನ್​ ಡಾ. ರಂಜಿತಾ ಎಸ್​. ಶೆಟ್ಟಿ ಮತ್ತು ಉಪ ಕುಲಸಚಿವ (ಮೌಲ್ಯಮಾಪನ - ಆರೋಗ್ಯ ವಿಜ್ಞಾನ) ಡಾ. ಶ್ರೀಜಿತ್​ ಜಿ. ಅತಿಥಿಗಳಾಗಿದ್ದರು. ಕನ್ಸಲ್ಟೆಂಟ್​ ಹೆಮಟಾಲಜಿಸ್ಟ್​ ಡಾ. ಪವಿತ್ರಾ ಡಿ.ಎಸ್​ ಸ್ವಾಗತಿಸಿದರು, ಹಿಮೋಫಿಲಿಯಾ ಸೆಂಟರ್​ನ ಕ್ಲಿನಿಕಲ್​ ಸಂಯೋಜಕಿ ಡಾ. ಅರ್ಚನಾ ಎಂ.ವಿ ಅವಲೋಕನ ನೀಡಿದರು. ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷೆ ಡಾ. ಸುಲೋಚನಾ ಬಿ. ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತರಿಗೆ ರಕ್ತಸ್ರಾವದ ಅಸ್ವಸ್ಥತೆಗಳ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಾಗಾರದಲ್ಲಿ ಡಾ. ಅರ್ಚನಾ ಎಂ.ವಿ, ಡಾ. ಪವಿತ್ರಾ ಡಿ.ಎಸ್​, ಡಾ. ಕವಿಶಾ ಭಟ್​, ಡಾ. ಅಂಜಲಿನ್​ ಡಿ'ಸೋಜಾ ಮತ್ತು ಡಾ. ಸ್ವಾತಿ ಪಿ.ಎಂ. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.