ಉಡುಪಿ: ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾ ಒಂದು ನಿಶ್ಯಬ್ದ ದೃಷ್ಟಿ ಚೋರ, ನಿಧಾನವಾಗಿ ಸಂಪೂರ್ಣ ದೃಷ್ಟಿಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗ್ಲುಕೋಮಾ ರೋಗಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೆ ಎಂ ಸಿ ಮಣಿಪಾಲ ಡೀನ್ ಡಾ.ಪದ್ಮರಾಜ ಹೆಗ್ಡೆ ಹೇಳಿದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ವಿಶ್ವ ಗ್ಲುಕೋಮಾ ಸಪ್ತಾಹ ಅಂಗವಾಗಿ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ರೋಮೆಟ್ರಿ ವಿಭಾಗ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ.ಜಿ.ಅರುಣ್ ಮಯ್ಯ ಗ್ಲುಕೋಮಾ ಕುರಿತಾದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಯಂಸೇವಕರಿಗೆ ಪ್ರಶಂಸಾ ಪತ್ರ ವಿತರಿಸಿದರು. ಮಾಹೆ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಎಸ್. ಕಾಮತ್ ಸ್ವಾಗತಿಸಿದರು. ನೇತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನೀತಾ ಕೆಐಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಪ್ರೋಮೆಟ್ರಿ ವಿಭಾಗ ಮುಖ್ಯಸ್ಥೆ ಡಾ. ಕೃತಿಕಾ ಎಸ್. ವಂದಿಸಿದರು. ೫೦೦ ಕ್ಕೂ ಹೆಚ್ಚು ಜನರು ಇಂದಿನ ಶಿಬಿರದ ಪ್ರಯೋಜನ ಪಡೆದುಕೊಂಡರು.