ಕೆ.ಎಂ.ದೊಡ್ಡಿ : ಸಮೀಪದ ಅರೇಚಾಕನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಶಂಭುಲಿಂಗೇಶ್ವರಸ್ವಾಮಿ ವಿಶೇಷ ಪೂಜಾ ಮಹೋತ್ಸವ ಮತ್ತು ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರಸ್ವಾಮಿ, ಶ್ರೀ ಕದಗಾರ ಲಿಂಗೇಶ್ವರ ಮತ್ತು ಶ್ರೀ ದೇವಮ್ಮ ದೇವರುಗಳು ಉತ್ಸವ, ಶ್ರೀ ಭೈರವೇಶ್ವರ ದೇವರ ಕೊಂಡೋತ್ಸವದ ಮತ್ತು ಬಂಡಿ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ಧನ್ಯತೆ ಮೆರೆದರು. ಪೂಜಾ ಉತ್ಸವದ ಹಿನ್ನೆಲೆಯಲ್ಲಿ ಬಾಯಿಬೀಗ, ಮುಡಿಸೇವೆ ಹಾಗೂ ವಿವಿಧ ದೇವರುಗಳ ಮೆರವಣಿಗೆ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು. ದೇವಾಲಯಕ್ಕೆ ಬೆಳಗಿನಿಂದಲೇ ತಂಡೋಪ ತಂಡವಾಗಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಬೆಂಗಳೂರು, ಸಾವಂದಿಪುರ, ಅರೆಕಲ್‌ದೊಡ್ಡಿ, ಕಳ್ಳಮೆಳೆ ದೊಡ್ಡಿ, ಮುಟ್ಟನಹಳ್ಳಿ, ಗುರು ದೇವರಹಳ್ಳಿ, ಗುವ್ವಾಪುರ, ಹಾಡ್ಲಿ, ಯಡಗನಹಳ್ಳಿ, ಕಡಿಲುವಾಗಿಲು, ಆಲದಹಳ್ಳಿ, ಮಾದರಹಳ್ಳಿ, ಮಂಡ್ಯ ಹೊಸಹಳ್ಳಿ, ದೇವರ ಹಳ್ಳಿ, ಕೆ.ಪಿ. ದೊಡ್ಡಿ, ಮೈಸೂರು, ಎಲೆತೋಟದಹಳ್ಳಿ ಗ್ರಾಮಗಲ್ಲಿ ನೆಲೆಸಿರುವ ದೇವರ ಕುಲದವರು ತಮ್ಮ ಕುಲ ದೇವರಿಗೆ ವಿಶೇಷ ಪೂಜೆ ಸಮರ್ಪಣೆ ಮಾಡಿದ್ದು ಧನ್ಯತೆಯ ಸಂಕೇತವಾಗಿತ್ತು. ಭೈರವೇಶ್ವರ ಸ್ವಾಮಿ, ಶಂಭು ಲಿಂಗೇಶ್ವರಸ್ವಾಮಿ ಮತ್ತು ದೇವಮ್ಮ ಅವರ ವಿಶೇಷ ಪೂಜಾ ಮಹೋತ್ಸವದಲ್ಲಿ
ಬಸಪ್ಪಗಳ ಮೆರವಣಿಗೆಯೂ ಭಕ್ತರ ಸಮ್ಮುಖದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ್ದು ವಿಶೇಷವಾಗಿತ್ತು.