ಜಿಲ್ಲೆ

ಕೆಎಲ್‌ಇ ವೇಣುಧ್ವನಿ ನೇರ ಫೋನ್-ಇನ್

ಜಗದೀಶ ಹೊಂಬಳಿ

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್‌ಎಂ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ನಿಮಿತ್ತ ಗುರುವಾರ ನೇರ ಫೋನ್-ಇನ್ ಕಾರ್ಯಕ್ರಮ ಜರುಗಿತು.

ಕೆಎಲ್‌ಇ ಆಸ್ಪತ್ರೆಯ ಮನೋವೈದ್ಯ ಡಾ.ವಿನಾಯಕ ಕೊಪರ್ಡೆ ಮಾತನಾಡಿ, ಆತ್ಮಹತ್ಯೆ ಪ್ರಕರಣ ತಡೆಗಟ್ಟುವ ಕುರಿತು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಪ್ರತಿ ವರ್ಷ ಸೆ.10ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಯನ್ನು ಅಪಾಯದಿಂದ ಪಾರು ಮಾಡೋಣ ಎಂಬುದು ಈ ವರ್ಷದ ಘೋಷವಾಕ್ಯದ ಉದ್ದೇಶ ಎಂದು ತಿಳಿಸಿದರು.

ಆತ್ಮಹತ್ಯೆಗೆ ಕಾರಣಗಳು ಯಾವವು? ಯಾವ ವಯೋಮಾನದವರಲ್ಲಿ ಹೆಚ್ಚು ಕಂಡುಬರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಮುನ್ಸೂಚನೆಗಳು, ಆತ್ಮಹತ್ಯೆ ಪ್ರವೃತ್ತಿ ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಸಿದರು. ಸೋಷಿಯಲ್ ಮೀಡಿಯಾ ಮತ್ತು ಆನ್‌ಲೈನ್ ಗೇಮ್‌ಗಳಿಂದ ಯುವಜನತೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೇಗೆ ದೂರವಿರಬಹುದು ಹಾಗೂ ಆತ್ಮಹತ್ಯೆಗೆ ಯತ್ನಿಸುವವರು ಮನೋವೈದ್ಯರ ಸಮಾಲೋಚನೆ ಪಡೆಯುವುದರ ಕುರಿತು ಜಾಗೃತಿ ಮೂಡಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ.ಎಸ್., ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.