ಹುಬ್ಬಳ್ಳಿ: ಘಟಿಕೋತ್ಸವ ಕೇವಲ ಪದವಿ ಪ್ರದಾನ ಮಾಡುವ ಸಂಪ್ರದಾಯವಲ್ಲ, ವಿದ್ಯಾರ್ಥಿಗಳು ತಾವು ಕಂಡ ಕನಸು ಸಾಕಾರ ಮಾಡಿಕೊಂಡ ಘಳಿಗೆಯನ್ನು ಸಂಭ್ರಮಿಸುವ ಮಹಾ ಉತ್ಸವವಾಗಿದೆ. ಇದರೊಂದಿಗೆ ಅಪರಿಮಿತ ಭವಿಷ್ಯಕ್ಕೆ ನೀವು ತೆರೆದುಕೊಳ್ಳಲಿದ್ದೀರಿ ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ ಕರಂದಿಕರ ಹೇಳಿದರು.
ಇಲ್ಲಿಯ ವಿದ್ಯಾನಗರ ಬಿವಿಬಿ ಆವರಣದ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಅರೇನಾದಲ್ಲಿ ಶನಿವಾರ ಏರ್ಪಡಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪದವಿ ಪಡೆಯಲು ನೀವು ನಿರಂತರ ಪರಿಶ್ರಮ ಪಟ್ಟಿರುತ್ತಿರಿ, ಅನೇಕ ಸವಾಲುಗಳನ್ನು ಎದುರಿಸಿರುತ್ತೀರಿ, ಇದಕ್ಕಾಗಿ ನಿಮ್ಮ ಪಾಲಕರು ಕೂಡ ಹಗಲಿರುಳು ಬಹಳಷ್ಟು ಕಷ್ಟ ಪಟ್ಟಿರುತ್ತಾರೆ. ಇದನ್ನು ಸಂಭ್ರಮಿಸಬೇಕು. ಇಂತಹ ಸುಸಂದರ್ಭಕ್ಕೆ ಅತಿಥಿಯಾಗಿ ಬಂದಿರುವುದಕ್ಕೆ ನನಗೆ ಬಹಳ ಖುಷಿಯಾಗಿದೆ ಎಂದರು.
ತಂತ್ರಜ್ಞಾನದೊಂದಿಗೆ ನಡೆಯುತ್ತಿರುವ ಇಂದಿನ ಜಗತ್ತಿನಲ್ಲಿ ನೀವು ಗಳಿಸಿರುವ ತಾಂತ್ರಿಕ ಜ್ಞಾನ, ಕೌಶಲ, ಬಹುಮುಖ್ಯವಾಗಿ ಆತ್ಮವಿಶ್ವಾಸಗಳೊಂದಿಗೆ ಭವಿಷ್ಯದ ದಿನಗಳಿಗೆ ಕಾಲಿಡಬೇಕು. ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾಗುತ್ತಿದೆ. ಇಲ್ಲಿ ಸಂಶೋಧನೆ ಮುಖ್ಯ ಪಾತ್ರ ವಹಿಸುತ್ತಿದೆ. ಉದ್ಯಮಶೀಲತೆ, ತಾಂತ್ರಿಕ ಅಭಿವೃದ್ಧಿ, ಸಂಶೋಧನೆಯಲ್ಲಿ ಯುವಭಾರತಕ್ಕೆ ಬಹಳಷ್ಟು ಅವಕಾಶಗಳಿವೆ ಎಂದು ಹೇಳಿದರು.
ಕೆಎಲ್ಇ ತಾಂತ್ರಿಕ ವಿವಿಯು 145ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ ಸಾವಿರಾರು ಉದ್ಯೋಗ ಸೃಷ್ಟಿಸಿದೆ. ಶಿಕ್ಷಣ, ಸಂಶೋಧನೆ, ತರಬೇತಿಗೆ ಮಹೋನ್ನತ ವೇದಿಕೆ ಒದಗಿಸಿರುವ ವಿವಿಯು ಭಾರತದ ಬೆಳೆಯುತ್ತಿರುವ ಸಂಶೋಧನಾ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಐದು ಎಕರೆ ದೇಣಿಗೆ ವಾಗ್ದಾನ:
ಗೌರವ ಡಾಕ್ಟರೇಟ್ ಸ್ವೀಕರಿಸಿದ ಮಾಜಿ ಸಚಿವ, ನಿರಾಣಿ ಗ್ರುಪ್ ಅಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿ, ಸಪ್ತಷಿರ್ಗಳಿಂದ ಆರಂಭವಾದ ಕೆಎಲ್ಇ ಸಂಸ್ಥೆಯು ಇದೀಗ ಡಾ. ಪ್ರಭಾಕರ ಕೋರೆ ಅವರ ಸಾರಥ್ಯದಲ್ಲಿ ಹಲವು ಮಜಲುಗಳನ್ನು ತಲುಪಿದೆ. ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದೆ. ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಕೋರೆ ಅವರ ಅವಧಿಯಲ್ಲಿ ಬರಬೇಕು. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಐದು ಎಕರೆ ಜಮೀನು ನೀಡಲು ತಾವು ಸಿದ್ಧರಿದ್ದು, ಅಲ್ಲಿಯೂ ಒಂದು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.
ಕುಲಪತಿ ಪ್ರೊ. ಪ್ರಕಾಶ ತೆವರಿ, ವಾಷಿರ್ಕ ವರದಿ ವಾಚನ ಮಾಡಿದರು.
ವಿವಿಧ ವಿಭಾಗಗಳ 37 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕ, ಪಿಎಚ್.ಡಿ. ಸೇರಿ ಒಟ್ಟು 1677 ಪದವಿ ಪ್ರದಾನ ಮಾಡಲಾಯಿತು.
ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಅತಿಥಿಗಳ ಪರಿಚಯ ಮಾಡಿದರು. ಕೆಎಲ್ಇ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು.
ಪರೀಕ್ಷಾಂಗ ವಿಭಾಗದ ಡಾ. ಅನಿಲಕುಮಾರ ನಂದಿ, ಡೀನ್ ಡಾ. ಎನ್.ಎಚ್. ಅಯಾಚಿತ್, ಕುಲಸಚಿವ ಡಾ. ಬಸವರಾಜ ಅನಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.