ಹುಬ್ಬಳ್ಳಿ : ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳು ಪೂರಕವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕಾಗಿ ಹೆಚ್ಚೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಮಲ್ಲಸಜ್ಜನ ವ್ಯಾಯಾಮ ಹಾಗೂ ಆರೋಗ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಆನಂದ ನಾಡಗೀರ ಹೇಳಿದರು.
ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯ ಮಂಗಳವಾರ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕ ಶಕ್ತಿ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪಠ್ಯದಷ್ಟೇ ಕ್ರೀಡೆಗಳಿಗೂ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಡಾ. ಸುಂದರ ರಾಜ್ ಅರಸ್ ಮಾತನಾಡಿ, ಕ್ರೀಡೆಯು ಅನೇಕ ರೀತಿಯ ಜ್ಞಾನವನ್ನು ಜೀವನದಲ್ಲಿ ಹೆಚ್ಚು ಪ್ರಾಯೋಗಿಕವಾಗಿ ನೀಡುತ್ತದೆ. ಕ್ರೀಡೆಯೂ ಸಹ ಶೈಕ್ಷಣಿಕ ವಿಷಯವಾಗಿದೆ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ಡಾ. ಕಿರಣ ಕುಲಕರ್ಣಿ ಮಾತನಾಡಿ, ಜೀವನವೆಂಬ ಕ್ರೀಡೆಯಲ್ಲಿ ನಾವೆಲ್ಲರೂ ಕ್ರೀಡಾಪಟುಗಳೇ. ನಿತ್ಯವೂ ಹಲವಾರು ಚಲನೆಗಳನ್ನು ಮಾಡುತ್ತೇವೆ. ಆದ್ದರಿಂದ ಎಚ್ಚರಿಕೆಯಿಂದ ಗಾಯಗಳಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ. ಉಪ ಕುಲಪತಿ ಡಾ. ಅಶೋಕ ಶೆಟ್ಟರ ಮಾತನಾಡಿ, ಕ್ರೀಡೆಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃಧಿ್ಧ ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೇಜರ್ ಧ್ಯಾನಚಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಡೀನ್ ಡಾ. ಪಿ.ಜಿ. ತಿವಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡೀನ್ ಸಂಜಯ ಕೊಟಬಾಗಿ, ಮಧ್ವ ಕೋಲಾರ್, ಕ್ರೀಡಾ ನಿರ್ದೇಶಕ ಎಂ.ಎಂ. ಕುರಗೋಡಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಇತರರು ಪಾಲ್ಗೊಂಡಿದ್ದರು.
ಕೆ.ಎಲ್.ಇ. ಅಂಗ ಸಂಸ್ಥೆಗಳ 300ಕ್ಕೂ ಹೆಚ್ಚು ಕ್ರೀಡಾಪಟುಗಳು, ದೈಹಿಕ ಶಿಕ್ಷಣ ನಿರ್ದೇಶಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಪ್ರೊ. ವಿಜಯ ಕುಮಾರ ನಿಂಬಗಲ್ ಸ್ವಾಗತಿಸಿದರು. ಡಾ ಗುರುರಾಜ ಪುರಾಣಿಕ ವಂದಿಸಿದರು.