ಜಿಲ್ಲೆ

ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಚುನಾವಣೆ: ಅಧ್ಯಕ್ಷರಾಗಿ ಶಾಸಕ ಮಹಾಂತೇಶ ಕೌಜಲಗಿ ಅವಿರೋಧ ಆಯ್ಕೆ

ಬೆಳಗಾವಿ: ಜಾತ್ಯಾತೀತ, ಭಾಷಾತೀತ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ)ಯ ಅಧ್ಯಕ್ಷರಾಗಿ ಶಾಸಕ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾಗಿ ರಾಜೇಂದ್ರ ಹಂಜಿ, ಬಸವರಾಜ ತಟವಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದರು.

ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ಕಳೆದ ಮೂರು ಅವಧಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡು ಬರುತ್ತಿದ್ದಾರೆ ಎಂದರು.

ಕೆಎಲ್‌ಇ ಸಂಸ್ಥೆಯು 270ಕ್ಕೂ ಹೆಚ್ಚು ಅಂಗಸಂಸ್ಥೆಗಳು ದೇಶಾದ್ಯಂತ ವಿಸ್ತರಿಸಿವೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 16000 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆಲ್ಲಕ್ಕೂ ಕೆಎಲ್‌ಇ ಸಂಸ್ಥೆ ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಭಾಷಾತೀತವಾಗಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಗ್ರಾಮೀಣ ಭಾಗಗಳ ರೈತರ ಮಕ್ಕಳ ಕಲ್ಯಾಣಕ್ಕೆ ಶ್ರಮಿಸಿದೆ. ಅವರಿಗೆ ಉತ್ತಮವಾದ ಆರೋಗ್ಯ ಸೇವೆಗಳನ್ನು ನೀಡಿದೆ. ಅಂತೆಯೇ ಕೆಎಲ್‌ಇ ಸಂಸ್ಥೆಯು ಜನತೆಯ ವಿಶ್ವಾಸಕ್ಕೆ ಪಾತ್ರವಾಗಿದೆ, ಅವರ ನಂಬಿಕೆಯನ್ನು ಉಳಿಸಿಕೊಂಡು ಮುನ್ನಡೆದಿದೆ ಎಂದರು.

ಮತದಾನ ರದ್ದು: ಕೆಎಲ್‌ಇ ಸಂಸ್ಥೆಯ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಫೆ.29ರಂದು ಹುಬ್ಬಳ್ಳಿಯ ವಿ.ವಿ.ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರೀಕ ಮಹಾವಿದ್ಯಾಲಯದಲ್ಲಿ ಹಾಗೂ ಮಾರ್ಚ್ 1ರಂದು ಬೆಳಗಾವಿ ಲಿಂಗರಾಜು ಮಹಾವಿದ್ಯಾಲಯದಲ್ಲಿ ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿತ ಸದಸ್ಯರ ಆಯ್ಕೆ ಚುನಾವಣೆ ಮತದಾನ ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಬಿ.ಜಿ.ದೇಸಾಯಿ ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶಿವಾನಂದ ಕೌಜಲಗಿ ಸೇರಿ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಡಾ.ಬಿ.ಜಿ.ದೇಸಾಯಿ ಇದ್ದರು.

ಪದಾಧಿಕಾರಿಗಳ ವಿವರ: ಮಹಾಂತೇಶ ಶಿವಾನಂದ ಕೌಜಲಗಿ (ಅಧ್ಯಕ್ಷ) ರಾಜೇಂದ್ರ ವಿರುಪಾಕ್ಷಪ್ಪ ಹಂಜಿ (ಉಪಾಧ್ಯಕ್ಷ), ಬಸವರಾಜ ಶಿವಲಿಂಗಪ್ಪ ತಟವಟಿ (ಉಪಾಧ್ಯಕ್ಷ) ಆಡಳಿತ ಮಂಡಳಿ ಸದಸ್ಯರು: ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ ಪ್ರಭಾಕರ ಕೋರೆ, ಶ್ರೀಶೈಲಪ್ಪ ಚನ್ನಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ. ಶಂಕರಣ್ಣ ಈಶ್ವರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನೀಲ ವಿಜಯಬಸಪ್ಪ ಪಟ್ಟೇದ, ವಿರುಪಾಕ್ಷಿ ಶಿವಲಿಂಗಪ್ಪ ಸಾಧುನವರ.

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ.ಹಿರಿಯರ ಮಾರ್ಗದರ್ಶನ, ಸಲಹೆಗಳನ್ನು ಪಡೆದು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. | ಮಹಾಂತೇಶ ಕೌಜಲಗಿ, ಕೆಎಲ್‌ಇ ಸಂಸ್ಥೆಯ ನೂತನ ಅಧ್ಯಕ್ಷ