ಜಿಲ್ಲೆ

ಶೈಕ್ಷಣಿಕ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆ, ಕೆಎಲ್ಇ ಟೆಕ್ ಜೆಎನ್ ಸಿಎಎಸ್ಆರ್ ಮಧ್ಯೆ ಒಡಂಬಡಿಕೆ

Dharwada - Basavaraj Idli

ಹುಬ್ಬಳ್ಳಿ: ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ವಿಚಾರ ವಿನಿಮಯ ಹಾಗೂ ಜ್ಞಾನಾಭಿವೃದ್ಧಿಗಾಗಿ ಇಲ್ಲಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್ ಸಿಎಎಸ್ಆರ್) ಇವುಗಳ ಮಧ್ಯೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಇಲ್ಲಿಯ ವಿದ್ಯಾನಗರ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಕಾಶ ತೆವರಿ ಹಾಗೂ ಜೆಎನ್ಸಿಎಎಸ್ಆರ್ ಅಧ್ಯಕ್ಷ ಡಾ. ಜಿ.ಯು. ಕುಲಕರ್ಣಿ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಪರಸ್ಪರ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಐಐಟಿ ಡೀನ್ ಡಾ. ಎಸ್.ಎಂ. ಶಿವಪ್ರಸಾದ, ಎರಡು ಸಂಸ್ಥೆಗಳ ಮಧ್ಯೆ ಶೈಕ್ಷಣಿಕ ಸಹಕಾರ ವಿಸ್ತರಿಸಲು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳನ್ನು ಉತ್ತೇಜಿಸಲು ಈ ಒಪ್ಪಂದ ಪ್ರಮುಖ ಹೆಜ್ಜೆಯಾಗಿದೆ. ಇದರಿಂದ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೆಎನ್ಸಿಎಎಸ್ಆರ್ ಅಧ್ಯಕ್ಷ ಡಾ. ಜಿ.ಯು. ಕುಲಕರ್ಣಿ ಮಾತನಾಡಿ, ಎರಡು ದಿಗ್ಗಜ ಸಂಸ್ಥೆಗಳು ಈ ಒಡಂಬಡಿಕೆ ಮೂಲಕ ಹತ್ತಿರ ಬಂದಿವೆ. ಮೂಲ ಸಂಶೋಧನೆ, ವಿದ್ಯುತ್, ವೈದ್ಯಕಿಯ, ಆರೋಗ್ಯ ಕ್ಷೇತ್ರ ಮುಂತಾದ ವಲಯಗಳಲ್ಲಿ ಸಂಶೋಧನೆ ಕೈಗೊಳ್ಳುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಪರಸ್ಪರ ಕೈ ಜೋಡಿಸಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದರು.

ಕಲಿಕೆ, ಸಂಶೋಧನೆಯಲ್ಲಿ ಆಸಕ್ತಿ ಇರುವವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಸಹಕಾರ ದೊರೆಯುತ್ತದೆ. ಪರಸ್ಪರ ಸಂವಾದಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಎನ್ಸಿಎಎಸ್ಆರ್ ಮಧ್ಯದ ಈ ಒಪ್ಪಂದವು ಪ್ರಸ್ತುತ ದಿನಗಳಲ್ಲಿ ಮಹತ್ವ ಪಡೆದಿದೆ. ಇಂಜಿನಿಯರಿಂಗ್ ವಿಭಾಗವು ವಿಜ್ಞಾನ ಕ್ಷೇತ್ರದ ಪ್ರಮುಖ ಅಂಗವಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ವಿಜ್ಞಾನ ಹಾಗೂ ಇಂಜಿನಿಯರಿಂಗ್ ಎರಡನ್ನೂ ಒಟ್ಟುಗೂಡಿಸುವ ಸೇತುವೆಯಾಗುವ ದಿಸೆಯಲ್ಲಿ ಒಡಂಬಡಿಕೆಗೆ ಹೆಚ್ಚು ಮಹತ್ವ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ಕೋರ್ಸ್ ಅಭಿವೃದ್ಧಿ, ಸಂಪನ್ಮೂಲ ಮತ್ತು ಸೌಕರ್ಯಗಳ ಹಂಚಿಕೊಳ್ಳುವಿಕೆ, ಎರಡು ಸಂಸ್ಥೆಗಳಲ್ಲಿನ ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳು ಮತ್ತು ತಾಂತ್ರಿಕ ತಜ್ಞತೆಯ ಬಳಕೆ, ಸಂಯುಕ್ತವಾಗಿ ಸೆಮಿನಾರ್, ಕಾರ್ಯಾಗಾರಗಳ ಆಯೋಜನೆ, ತರಬೇತಿ, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಸಂಟಿಸಬಹುದಾಗಿದೆ ಎಂದರು.

ಕುಲಸಚಿವ ಡಾ. ಬಸವರಾಜ ಅನಾಮಿ, ಡಾ. ಎನ್.ಎ. ಅಯಾಚಿತ್, ಇತರರು ಇದ್ದರು.