ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಫ್ಯಾಷನ್ ಮತ್ತು ಅಪೆರಲ್ ಡಿಸೈನ್ ವಿಭಾಗವು "ಫ್ಯಾಷನ್ ಪ್ರಿನರ್ಶಿಪ್: ರನದ ವೇನಿಂದ ಆದಾಯದವರೆಗೆ' ವಿಷಯದ ಕುರಿತು ವಿಶಿಷ್ಟ ಮತ್ತು ಪ್ರೇರಣಾದಾಯಿ ಸೆಮಿನಾರ್ ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಅತಿಥಿಯಾಗಿದ್ದ ಹೆಸರಾಂತ ಫ್ಯಾಷನ್ ಉದ್ಯಮಿ, ಕರ್ನಾಟಕ ಟೆಕ್ಸಟೈಲ್ ಕೌನ್ಸಿಲ್, ಇಂಡಿಯಾದ ಅಧ್ಯಕ್ಷೆ ಡಾ. ಮಾಯಾ ಪ್ರದಿಪ ಉಪನ್ಯಾಸ ನೀಡಿದರು.
ಫ್ಯಾಷನ್ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಮಹತ್ವ, ಹೂಡಿಕೆ, ಮಾರುಕಟ್ಟೆ ಪರಿಕಲ್ಪನೆ ಮತ್ತು ಸ್ಪರ್ಧಾತ್ಮಕತೆಯ ಪ್ರಕ್ರಿಯೆಗಳನ್ನು ವಿವರಿಸಿದರು. ಡಿಸೈನರ್ಗಳಾಗಿ ಉದ್ಯೋಗ ಆರಂಭಿಸಿ, ಯಶಸ್ವಿ ಬ್ರಾಂಡ್ ನಿರ್ಮಾಣದವರೆಗೆ ಇರುವ ಪ್ರಕ್ರಿಯೆ, ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಅವರು ಸಲಹೆ ನೀಡಿದರು.
ತಮ್ಮ ಸ್ವಂತ ಉದ್ಯಮದ ಅನುಭವ ಹಂಚಿಕೊಂಡ ಡಾ. ಮಾಯಾ ಅವರು, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆ ತಂತ್ರಗಳು ಮತ್ತು ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಮಾರ್ಗಗಳನ್ನು ತಿಳಿಸಿದರು. ತಂತ್ರಜ್ಞಾನ ಬಳಸಿಕೊಂಡು ಬ್ರಾಂಡ್ ಸುಸ್ಥಿರವಾಗಿ ಬೆಳೆಸುವ ಕುರಿತು ಮೌಲ್ಯಯುತ ಸಲಹೆ ನೀಡಿದರು.
ಸಂವಾದ:
ಉಪನ್ಯಾಸದ ಬಳಿಕ ಡಾ. ಮಾಯಾ ಅವರು ಸಂವಾದ ನಡೆಸಿದರು. ಉದ್ಯಮ ಆರಂಭ, ಮಾರುಕಟ್ಟೆ ಪ್ರವೇಶ, ಬಂಡವಾಳ ಹೂಡಿಕೆ, ಗ್ರಾಹಕ ಸಂಪರ್ಕ ವಿವಿಧ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳು ಉತ್ತರ ಪಡೆದುಕೊಂಡರು.
ಉದ್ಯಮದಲ್ಲಿ ಎದುರಿಸಬೇಕಾದ ಸವಾಲುಗಳು, ಸಮತೋಲನ, ಪರಿಸರ ಸ್ನೇಹಿ ವಸ್ತ್ರಗಳು, ಮರುಬಳಕೆ ವಸ್ತುಗಳ ಬಳಕೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.
ಫ್ಯಾಷನ್ ಮತ್ತು ಅಪೆರಲ್ ಡಿಸೈನ್ ವಿಭಾಗದ ಮುಖ್ಯಸ್ಥೆ ಡಾ. ಹೇಮಲತಾ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಕೌಶಲ ಮತ್ತು ಪ್ರೇರಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.