ಮೂವರು ಮಕ್ಕಳೊಂದಿಗೆ ಡಾ.ಪ್ರತೀಕ ಜೋಶಿ ದಂಪತಿ. 
ಜಿಲ್ಲೆ

ಕೆಎಲ್‌ಇ ವೈದ್ಯ ವಿದ್ಯಾರ್ಥಿ ಸಾವಿಗೆ ಕಂಬನಿ

ಬೆಳಗಾವಿ: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೂವರು ಮಕ್ಕಳ ಸಮೇತ ಮೃತಪಟ್ಟ ಡಾ.ಪ್ರತೀಕ ಜೋಶಿ ದಂಪತಿಗೆ ಬೆಳಗಾವಿ ಕೆಎಲ್‌ಇ ಸಂಸ್ಥೆಯು ಕಂಬಿನಿ ಮಿಡಿದಿದೆ.

ರಾಜಸ್ಥಾನ ಮೂಲದ ಡಾ.ಪ್ರತೀಕ ಜೋಶಿ ಬೆಳಗಾವಿ ಕೆಎಲ್ಇ ವೈದ್ಯಕೀಯ ಕಾಲೇಜಿನಲ್ಲಿ 2000ರಿಂದ 2005ನೇ ಬ್ಯಾಚ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು. ಬಳಿಕ ಕೋಲಾರದಲ್ಲಿ ಎಂ.ಡಿ. ಪದವಿ ಮುಗಿಸಿ 2021ರಲ್ಲಿ ಲಂಡನ್‌ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಡಾ.ಕೋಮಿ ವ್ಯಾಸ್ ರಾಜಸ್ಥಾನದ ಉದಯಪುರದ ಪೆಸಿಫಿಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಡಾ. ಜೋಶಿ ದಂಪತಿ ಮೂವರು ಮಕ್ಕಳನ್ನು ಲಂಡನ್‌ಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ವಿಮಾನ ಅಪಘಾತವಾಗಿ ಮೃತಪಟ್ಟಿದ್ದಾರೆ.

ಬೆಳಗಾವಿ ಕೆಎಲ್ಇ ವೈದ್ಯಕೀಯ ಕಾಲೇಜಿನಲ್ಲಿ ಓದಿರುವ ಡಾ.ಪ್ರತೀಕ ಜೋಶಿ ಅವರ ಸಹಪಾಠಿಗಳು ತಮ್ಮ ಕಾಲೇಜು ದಿನಗಳನ್ನು ನೆನೆದು ಕಣ್ಣೀರು ಹಾಕಿದರು. ಇದೇ ಸೆಪ್ಟೆಂಬರ್‌ನಲ್ಲಿ 2000ರಿಂದ 2005ನೇ ಬ್ಯಾಚ್‌ನಲ್ಲಿ ಎಂಬಿಬಿಎಸ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ಆ ಕಾರ್ಯಕ್ರಮಕ್ಕೆ ಬರುವುದಾಗಿ ಡಾ. ಪ್ರತೀಕ ಹೇಳಿದ್ದರು ಎಂದು ಸಹಪಾಠಿಗಳು ಸ್ಮರಿಸಿದರು.

ರಾಜಸ್ಥಾನ ಮೂಲದ ಡಾ.ಪ್ರತೀಕ ಜೋಶಿ ಕೆಎಲ್‌ಇ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದರು. ಒಳ್ಳೆಯ ವಿದ್ಯಾರ್ಥಿ. ಎಲ್ಲರ ಜತೆಗೆ ಬೆರೆಯುವ ಗುಣ ಹೊಂದಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದರು. ಜೀವನ ಕಟ್ಟಿಕೊಳ್ಳಲು ಕುಟುಂಬ ಸಮೇತ ಲಂಡನ್‌ಗೆ ಹೋಗುತ್ತಿದ್ದ. ನನ್ನ ವಿದ್ಯಾರ್ಥಿಯ ದಾರುಣ ಅಂತ್ಯ ನಿಜಕ್ಕೂ ಬೇಸರ ತರಿಸಿದೆ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ | ಡಾ.ಎನ್.ಮಹಾಂತಶೆಟ್ಟಿ ಪ್ರಾಚಾರ್ಯೆ ಕೆಎಲ್‌ಇ ಜೆಎನ್‌ಎಂಸಿ ಕಾಲೇಜು