ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ (ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೀಸರ್ಚ್- ಸಿಎಐಆರ್) ಸ್ಥಾಪನೆ ಮಾಡಲಾಗಿದ್ದು, ಏ. 12ರಂದು ಬೆಳಗ್ಗೆ 11ಕ್ಕೆ ಉದ್ಘಾಟಿಸಲಾಗುತ್ತಿದೆ.
ವಿದ್ಯಾನಗರದ ಬಿವಿಬಿ ಆವರಣದಲ್ಲಿರುವ ಸಿ- ಲೈಟ್ ಭವನದ 2ನೇ ಮಹಡಿಯಲ್ಲಿ ಸ್ಥಾಪಿಸಿರುವ ಸಿಎಐಆರ್ ಲ್ಯಾಬ್ ಅನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿ ಪ್ರೊ. ಮನೀಷ್ ಜೋಶಿ ಅವರು ಉದ್ಘಾಟಿಸುವರು. ಕೆಎಲ್ಇ ಕಾರ್ಯಾಧ್ಯಕ್ಷ ಹಾಗೂ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು.
ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ವಿವಿಧ ಡೀನ್ ಗಳು, ವಿಭಾಗಾಧ್ಯಕ್ಷರು, ಕೇಂದ್ರದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿರುವರು.
ಉದ್ಘಾಟನೆ ನಂತರ ಕೆಎಲ್ಇ ಟೆಕ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರೊ. ಮನೀಷ್ ಜೋಶಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವು ಅತ್ಯಾಧುನಿಕ ಸಂಶೋಧನೆ, ನವೀನತೆ ಮತ್ತು ಸಹಯೋಗಕ್ಕೆ ಕೇಂದ್ರಬಿಂದುವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಹೊಸ ಗಡಿಗಳನ್ನು ಅನ್ವೇಷಿಸಲು ಪ್ರೇರಣೆ ನೀಡುವ ದೃಷ್ಟಿಕೋನವನ್ನು ಹೊಂದಿದೆ.
ಇದು ಕೆಎಲ್ಇ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತಗೊಂಡಿರುವ ಏಳು ಅಗ್ರಗಣ್ಯ ಸ್ಟಾರ್ (ಸೈನ್ಸ್- ಟೆಕ್ನಾಲಜಿ ಅಡ್ವಾನ್ಸಡ್ ರೀಸರ್ಚ್) ಲ್ಯಾಬ್ ಗಳಲ್ಲಿ ಒಂದಾಗಿದೆ.