ಜಿಲ್ಲೆ

ನೀಲಹಳ್ಳಿ; ಶಾಲೆ ಪಕ್ಕದ ಕಸ ವಿಲೇವಾರಿ ಘಟಕ ಸ್ಥಳಾಂತರ ಮಾಡಿ

ಕೃಷ್ಣ ಕುಲಕರ್ಣಿ

ಮಳಖೇಡ: ನೀಲಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲಿರುವ ಕಸ ವಿಲೇವಾರಿ ಘಟಕವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶಾಲೆಯ ಪಕ್ಕದಲ್ಲಿಯೇ ಕಸ ವಿಲೇವಾರಿ ಘಟಕವಿದ್ದು, ಗ್ರಾಮದ ಎಲ್ಲ ಕಸ ಇಲ್ಲಿಯೇ ತಂದು ಹಾಕಲಾಗುತ್ತಿದೆ. ಇದರಿಂದ ದುರ್ವಾಸನೆ ಹರಡುತ್ತಿದ್ದು, ಶಾಲೆಯಲ್ಲಿ ಕೂರಲು ಆಗದಂತ ಸ್ಥಿತಿ ಇದೆ. ಇದಲ್ಲದೆ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿದೆ. ಹೀಗಾಗಿ ಕೂಡಲೇ ಘಟಕ ಸ್ಥಳಾಂತರ ಮಾಡಬೇಕು. ಅಲ್ಲದೆ ಶಾಲೆಗೆ ಹೋಗುವ ಮಾರ್ಗದಲ್ಲಿ ಬೆಳೆದಿರುವ ಮುಳ್ಳು-ಕಂಟಿ ತೆರವು ಮಾಡಬೇಕು. ಬಿಸಿಯೂಟ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಪಂ ಕಚೇರಿ ಅಧಿಕಾರಿ ನರಸಪ್ಪ, ಬಿಸಿಯೂಟ ಎಡಿ ಉಮಾಪತಿ ರಾಜು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮನವಿಪತ್ರ ಸ್ವೀಕರಿಸಿ, ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಬಿಸಿಯೂಟ ಸಿಬ್ಬಂದಿ ಕುರಿತಂತೆ ಗ್ರಾಪಂ ಹಾಗೂ ಶಾಲಾ ಶಿಕ್ಷಕರು ಕೂಡಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಸ್ವತಂತ್ರ ಅಡುಗೆ ಕೇಂದ್ರ ಮಾಡಲು ಅನುಮೋದನೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಕಾಶೀನಾಥ ಮಡಿವಾಳ, ಪ್ರಮುಖರಾದ ಅಶೋಕ ಸಾಹು, ಗಣೇಶ ನೀಲಹಳ್ಳಿ, ಶರಣು ಜಮಾದಾರ ಇತರರಿದ್ದರು.