ಕಲಬುರಗಿ: ಜನಸ್ಪಂದನಾ ಕಾರ್ಯಕ್ರಮದ ಕುರಿತು ನಗರದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ, ಮಾ.5ರಂದು ಜನಸ್ಪಂದನ ನಡೆಯಲಿದೆ ಎಂದು ಹೇಳಿದ್ದರು. ಆದರೆ ರಾತ್ರಿ ಎಡಿಸಿ ರಾಯಪ್ಪ ಹುಣಸಗಿ ಪ್ರಕಟಣೆ ಹೊರಡಿಸಿ ಮಾ.7ರಂದು ಜನಸ್ಪಂದನ ನಡೆಯಲಿದೆ ಎಂದಿದ್ದಾರೆ. ಇದರಿಂದ ಯಾರ ಮಾತನ್ನು ನಂಬಬೇಕು ಎಂದು ಜನ ಗೊಂದಲಲ್ಲಿದ್ದಾರೆ.
ಇತ್ತ ಶಾಸಕರು ಸುದ್ದಿಗೋಷ್ಠಿ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಮಾ.5ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ರಾತ್ರಿ ಅಪರ ಜಿಲ್ಲಾಧಿಕಾರಿ ದಿನಾಂಕವನ್ನು ಮಾ.7ಕ್ಕೆ ಮುಂದೂಡಿ ಪ್ರಕಟಣೆ ಹೊರಡಿಸುತ್ತಿದ್ದಾರೆ. ಇದರಿಂದ ಜನರಿಗೆ ಗೊಂದಲ ಮೂಡುತ್ತಿದ್ದು, ಶಾಸಕರ ಮಾತು ನಂಬಬೇಕೋ, ಅಪರ ಜಿಲ್ಲಾಧಿಕಾರಿ ಪ್ರಕಟಣೆ ನಂಬಬೇಕೋ ಎನ್ನುವ ಗೊಂದಲ್ಲಿರುವಂತಾಗಿದೆ.
ಈ ಹಿಂದೆಯೂ ಜನಸ್ಪಂದನ ನಡೆಯಲಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಸುದ್ದಿಗೋಷ್ಠಿ ಮಾಡಿದ್ದರು. ಆದರೆ ಮರುದಿನ ಮುಂದೂಡಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿತ್ತು. ಹೀಗೆ ಪದೇ ಪದೆ ಗೊಂದಲ ಮೂಡಿಸಿ ಮಾಹಿತಿ ನೀಡುತ್ತಿದ್ದು, ಪರಸ್ಪರ ಸಂವಹನ ಕೊರತೆ ಎದ್ದು ಕಾಡುತ್ತಿದ್ದು, ಜನರ ಅಹವಾಲು ಆಲಿಸುವುದು ಎಂದು ಎಂಬುದು ಸ್ಪಷ್ಟವಾಗುತ್ತಿಲ್ಲ. ಈಗ ಯಾರ ಮಾತನ್ನು ನಂಬಬೇಕು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.