ಜಿಲ್ಲೆ

ಅನೈತಿಕ ಸಂಬಂಧ; ಪ್ರಿಯಕರನ ಜತೆ ಸೇರಿ ಮೈದುನನನ್ನೇ ಕೊಂದ ಅತ್ತಿಗೆ ?

ಕೃಷ್ಣ ಕುಲಕರ್ಣಿ

ಆಳಂದ: ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಶನಿವಾರ ನಡೆದಿದೆ.

ಮುನ್ನಹಳ್ಳಿ ಗ್ರಾಮದ ಹೀರಾಲಾಲ್ ಉಸ್ಮಾನ್‌ಸಾಬ್ ಲದಾಫ್ (38) ಮೃತ ವ್ಯಕ್ತಿ. ರವಿ ಜಾನೆ ಹಾಗೂ ಶೇಖರ್ ಹಲ್ಲೆಗೈದವರು. ಇವರಿಗೆ ಹೀರಾಲಾಲ್‌ನ ಸಹೋದರನ ಪತ್ನಿ ಜೈಬುನ್‌ಬೀ ಸಹಕಾರ ನೀಡಿದ್ದಾಳೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

ಘಟನೆಯ ವಿವರ: ಹೀರಾಲಾಲ್ ಲದಾಫ್ ಅವರ ಸಹೋದರನ ಪತ್ನಿ ಜೈಬುನಬೀ ಜತೆ ರವಿ ಜಾನೆ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯಕ್ಕೆ ಹೀರಾಲಾಲ್ ಮತ್ತು ರವಿ ಜಾನೆ ಮಧ್ಯೆ ದ್ವೇಷ ಬೆಳೆದಿತ್ತು, ಅಲ್ಲದೆ ನಿರಂತರ ಜಗಳ ಆಗುತ್ತಿತ್ತು. ತಮಗೆ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಕಾರಣದಿಂದಾಗಿ ಜೈಬುನ್‌ಬೀ ಸಹಕಾರದೊಂದಿಗೆ ರವಿ ಮತ್ತು ಶೇಖರ ಸೇರಿ ಮೇ 23ರಂದು ರಾತ್ರಿ 9.30ಕ್ಕೆ ಹೀರಾಲಾಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಕೂಡಲೇ ಹೀರಾಲಾಲ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 25ರಂದು ಸಂಜೆ ಮೃತಪಟ್ಟಿದ್ದಾರೆ.

ಮೃತನ ಪತ್ನಿ ನೂರಜಾಬೀ ಲದಾಫ್ ಹೇಳಿಕೆ ಮೇರೆಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.