ಬಸವಕಲ್ಯಾಣ: ಮಹಾರಾಷ್ಟದಲ್ಲಿ ಸರ್ಕಾರದ ವಿರುದ್ಧ ಮರಾಠ ಸಮಾಜದ ಹಿಂದುಳಿದ ವರ್ಗ ನಡೆಸುತ್ತಿರುವ ಹೋರಾಟದ ವೇಳೆ ಉದ್ರಿಕ್ತ ಗುಂಪಿನಿಂದ ಕರ್ನಾಟಕದ ಬಸ್‌ಗೆ ಉಮರ್ಗಾ ಹತ್ತಿರದ ತರುರಿ ಬಳಿ ಬೆಂಕಿ ಹಚ್ಚಲಾಗಿದೆ.
ಸೋಮವಾರ ಸಂಜೆ ಗ್ರಾಮದಲ್ಲಿ ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ಪೊಲೀಸರ ನೆರವಿನಿಂದ ಬಸ್‌ನಲ್ಲಿದ್ದ ೩೯ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರು ತಲುಪುವ ಸ್ಥಳಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಾಷ್ಟದಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್‌ಗಳನ್ನು ಹತ್ತಿರದ ಪೊಲೀಸ್ ಠಾಣೆ, ಬಸ್ ಡೀಪೊಗಳಲ್ಲಿ ಪಾರ್ಕ್ ಮಾಡುವಂತೆ ಸಂಸ್ಥೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿ ಮಹಾರಾಷ್ಟ ಕಾರ್ಯಾಚರಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.