ಡಿಎಸ್ ಹೂಲಗೇರಿ. 
ಜಿಲ್ಲೆ

ಕೆಕೆಆರ್‌ಡಿಬಿ ಅನುದಾನದ ಕಾಮಗಾರಿ ಕಳಪೆ

ಗಾಯತ್ರಿ ಮಾಲಿಪಾಟೀಲ್

ಲಿಂಗಸುಗೂರು: ಕೆಕೆಆರ್‌ಡಿಬಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಕಳಪೆಯಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಕೆಕೆಆರ್‌ಡಿಬಿಯಿಂದ 80 ರಿಂದ 90 ಕೋಟಿ ರೂ. ಅನುದಾನ ಬಂದಿದೆ. ಶಾಸಕ ಮಾನಪ್ಪ ವಜ್ಜಲ ಅವರು ಮುತುವರ್ಜಿ ವಹಿಸಿ ಕೆಆರ್‌ಐಡಿಎಲ್‌ಗೆ (ಭೂ ಸೇನಾ ನಿಗಮ) ಗುತ್ತಿಗೆ ನೀಡುವ ಬದಲು ನೇರವಾಗಿ ಏಜೆನ್ಸಿಗೆ ನೀಡಿದ್ದು ಅಂದಾಜು ಪಟ್ಟಿಯಲ್ಲಿದ್ದಂತೆ ಕಾಮಗಾರಿ ನಡೆದಿಲ್ಲ. ಈಗಾಗಲೇ ಲೋಕಾಯುಕ್ತರು ತನಿಖೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಮಲತಾಯಿ ದೋರಣೆ ತೋರಿಸುತ್ತದೆ ಎಂದು ಶಾಸಕರು ಹೇಳಿರುವುದು ಸುಳ್ಳು ಆರೋಪ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಕಡಿಮೆ ಅನುದಾನ ಬರುತ್ತಿತ್ತು. ಅತಿವೃಷ್ಠಿ, ಅನಾವೃಷ್ಠಿ ಅನುದಾನ ಕೆಆರ್‌ಐಡಿಎಲ್‌ಗೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಅನುದಾನ ಬಳಸಲು ಇಲಾಖೆ ಇದೆ. ಲೋಕೋಪಯೋಗಿ ಇಲಾಖೆಯೂ ಇದೆ ಅದುಬಿಟ್ಟು ಕೆಆರ್‌ಐಡಿಎಲ್‌ಗೆ ಕೊಡುವ ಅಗತ್ಯವೇನಿತ್ತು. ಸಿಸಿರಸ್ತೆ ನಿಯಮದಂತೆ ಮಾಡಿಲ್ಲ. ರಾತ್ರಿ ಕಂಕರ್, ಮರಂ ಉಗ್ಗುತ್ತಾರೆ ಮಾರನೇ ದಿನ ಸಿಮೆಂಟ್ ಕೆಲಸ ಮಾಡುತ್ತಾರೆ. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ತಿಳಿಸಿದರು.

ನ್ಯಾಯಮೂರ್ತಿ ನಾಗಮೋಹನದಾಸ ವರದಿಯಂತೆ ಪರಿಶಿಷ್ಟ ಜಾತಿಯ ಎಲ್ಲ ವರ್ಗಗಳಿಗೆ ಸರ್ಕಾರ ನ್ಯಾಯಸಮ್ಮತ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಎಲ್ಲ ಜಾತಿಯ ಸಾಮಾಜಿಕ ನ್ಯಾಯ ಒದಗಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಶಾಸಕ ಮಾನಪ್ಪ ವಜ್ಜಲ ಅವರು ಸಮೀಕ್ಷೆ ಸಾಮಾಜಿಕ, ಆರ್ಥಿಕ, ಜಾತಿ ಸಮೀಕ್ಷೆ ಹಿಂದು ಧರ್ಮ ಒಡೆಯುವ ಹುನ್ನಾರದಿಂದ ಕೂಡಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇ ಹೆಸರೂರು, ಮುದಗಲ್‌ಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಿವಣ್ಣ ನಾಯಕ ಕೋಠಾ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ, ಪುರಸಭೆ ಸದಸ್ಯ ಮಹ್ಮದ ರಫಿ, ಜಿಲ್ಲಾ ಕಾಂಗ್ರೆಸ್ ಪದವೀಧರ ವಿಭಾಗ ಅಧ್ಯಕ್ಷ ಸಂಜೀವಪ್ಪ ಹುನಕುಂಟಿ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ವಿಭಾಗದ ಅಧ್ಯಕ್ಷ ಉಮೇಶ ಹುನಕುಂಟಿ ಇದ್ದರು.