ಕಿಕ್ಕೇರಿ : ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸಹದೇವು ತಿಳಿಸಿದರು. ಇಲ್ಲಿನ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಎನ್ನುವುದು ದೊಡ್ಡ ಪಿಡುಗಾಗಿದೆ. ಭೂಮಿಯಲ್ಲಿ ಕರಗದ ವಿಷಕಾರಕ ಹಾನಿಕಾರಕ ವಸ್ತುವಾಗಿ ಗೊತ್ತಿಲ್ಲದೆ ನಮ್ಮ ದೇಹ ಸೇರುತ್ತಿದೆ. ಅಂರ್ತಜಲ ವಿಷವಾಗುತ್ತಿದೆ. ಆಹಾರ ಪದಾರ್ಥ, ಇಡ್ಲಿ, ಸಾಂಬಾರ್, ಕಾಫಿ ಮತ್ತಿತರ ವಸ್ತುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ಮಾಡುವುದರಿಂದ ಬಲುಬೇಗ ಅನಾರೋಗ್ಯಕ್ಕೆ ತುತ್ತಾಗಬೇಕಿದೆ ಎಂದರು.
ನಮಗೆ ಅಗತ್ಯವಾಗಿ ಬೇಕಾಗಿರುವ ಶುದ್ಧ ಗಾಳಿಯು ಮರಗಿಡಗಳಿಂದ ದೊರಕಲಿದೆ ಎಂಬ ಅರಿವು ಸದಾ ಇರಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವುದರಿಂದ ಭೂಮಿ ಸವಕಳಿ, ಬೆಟ್ಟಗುಡ್ಡ ಕುಸಿತ, ತಾಪಮಾನ ವೈಪರೀತ್ಯ ತಡೆಯಬಹುದು ಎಂದರು. ರಾಸಾಯನಿಕ ಮುಕ್ತ ಬೆಳೆಗೆ ಆದ್ಯತೆ ನೀಡಬೇಕು.ಮನೆಗೊಂದು ಮರ ಬೆಳೆಸುವ ಪರಿಕಲ್ಪನೆಯನ್ನು ಮಕ್ಕಳು ರೂಢಿಸಿಕೊಳ್ಳಲು ಪಾಲಕರು ಜಾಗೃತಿ ಮೂಡಿಸಬೇಕು ಎಂದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಜಿ.ಎನ್. ಕುಮಾರಸ್ವಾಮಿ ಮಾತನಾಡಿ, ಈಚೆಗೆ ಕೇರಳದಲ್ಲಿ ನಡೆದ ಭೀಕರ ಗುಡ್ಡ ಕುಸಿತದಿಂದ ಊರಿಗೆ ಊರೇ ಸರ್ವನಾಶವಾಗಿದೆ. ನಮ್ಮ ರಾಜ್ಯದಲ್ಲಿ ರಸ್ತೆ ವಿಸ್ತರಣೆ ಮತ್ತಿತರ ನೆಪದಲ್ಲಿ ಗುಡ್ಡ ಕುಸಿದು ಸಾಕಷ್ಟು ಹಾನಿ ಸಂಭವಿಸಿದೆ. ಮರ,ಗಿಡಗಳು ಇದ್ದರೆ ಭೂ ಕುಸಿತ, ವಿಕೋಪ ತಡೆಯಬಹುದು ಎಂಬುದನ್ನು ಯುವ ಜನರು ಅರಿಯಬೇಕು ಎಂದರು.
ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆಯಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗುವುದಾಗಿ ಇದೇ ಸಂದರ್ಭ ಪ್ರತಿಜ್ಞೆ ಮಾಡಿದರು. ಎಸ್ ದೊರೆಸ್ವಾಮಿ, ಎನ್. ರವೀಂದ್ರ, ಎ.ಎಂ. ಮಂಜುನಾಥ್, ಎಸ್.ಡಿ. ಹರೀಶ್, ಎಂ. ವಿನಾಯಕ, ಜಿ. ರಮೇಶ್, ಎನ್.ಎ. ನಾಗೇಶ್ ಇದ್ದರು.