ಜಿಲ್ಲೆ

ಅಂಗವಿಕಲರನ್ನು ಮುಖ್ಯವಾಹಿನಿಗೆ ಕರೆತನ್ನಿ

ರೇಷ್ಮೆ ನಗರ ಡೆಸ್ಕ್

ಕನಕಪುರ : ಅಂಗವಿಕಲರ ಬಗ್ಗೆ ಅನುಕಂಪ ತೋರದೆ, ಅವರಿಗೆ ಅವಕಾಶ ನೀಡುವ ಮೂಲಕ ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡಬೇಕಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಹೇಳಿದರು.

ನಗರದ ರೋಟರಿ ಭವನದಲ್ಲಿ 32ನೇ ಅಂಗವಿಕಲರ ದಿನಾಚರಣೆ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಅಂಗವಿಕಲರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಅಂಗವಿಕಲರ ಅಭ್ಯುದಯಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ಅವರನ್ನು ಮಾನವೀಯತೆಯಿಂದ ನೋಡಬೇಕು. ತಾಲೂಕಿನಲ್ಲಿ ಅಮರಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರ ಮತ್ತು ಗ್ರಾಮೀಣ ಪುನರ್‌ವಸತಿ ಸಂಸ್ಥೆಗಳು ಅಂಗವಿಕಲರ ಸಹಾಯಕ್ಕಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅಮರಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಶಿವರಾಮು ಮಾತನಾಡಿ, ಸಂಘದಿಂದ ಅಂಗವಿಕಲರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಗಮನಕ್ಕೆ ತರುವುದಲ್ಲದೆ, ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕಾರ್ಯಕ್ರಮ ನಡೆಯುತ್ತಿದೆ. ಈ ದಿನ ದಿ.ಹಾಸ್ಪಿಟಲ್ ಸಹಯೋಗದಲ್ಲಿ 400ಕ್ಕೂ ಹೆಚ್ಚು ಅಂಗವಿಕಲರು ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದಾರೆ. ಇಂತಹ ಶಿಬಿರಗಳು ಅಂಗವಿಕರಿಗೆ ಸಹಕಾರಿಯಾಗಲಿದೆ ಎಂದರು.

ವೈದ್ಯರಾದ ಡಾ.ಸುಬ್ರಹ್ಮಣ್ಯ, ಡಾ.ಶ್ರೀನಿವಾಸ್, ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎನ್.ಪಿ.ರಾಮಚಂದ್ರ, ಲಗುನಾ ಗಾರ್ಮೆಂಟ್ಸ್‌ನ ಸ್ಮಿತಾ, ಬಿ.ಆರ್.ಡಬ್ಲ್ಯೂ ನಟರಾಜ್ ಇದ್ದರು.