ಹುಣಸೂರು ನಗರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಹದೇವರರಾವ್ ಬಾಗಲ್, ಲೋಕನಾಥ್‌ರಾವ್ ಕದಂ, ಜಿ.ವಿ.ಶ್ರೀನಾಥ್, ಹೊನ್ನಪ್ಪರಾವ್ ಕಾಳಿಂಗೆ ಇತರರಿದ್ದರು. 
ಜಿಲ್ಲೆ

ಕೆಕೆಎಂಪಿ ಸಂಸ್ಥೇ ತಾಲೂಕು ಗೌರವಾಧ್ಯಕ್ಷ ಮಹದೇವ್‌ರಾವ್ ಬಾಗಲ್ ಅಭಿಮತ

ಹುಣಸೂರು: ಛತ್ರಪತಿ ಶಿವಾಜಿ ಮಹಾರಾಜದ ಧರ್ಮನಿಷ್ಠೆ, ರಾಷ್ಟ್ರಭಕ್ತಿ ಮತ್ತು ಹಿಂದು ಸಾಮ್ರಾಜ್ಯ ಸ್ಥಾಪನೆಗಾಗಿನ ಅವರ ಕಟಿಬದ್ಧತೆ ಇಂದಿನ ಯುವಕರಿಗೆ ಪ್ರೇರಕಶಕ್ತಿಯಾಗಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್(ಕೆಕೆಎಂಪಿ)ನ ತಾಲೂಕು ಗೌರವಾಧ್ಯಕ್ಷ ಮಹದೇವ್ ರಾವ್ ಬಾಗಲ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದು ಸಾಮ್ರಾಜ್ಯ ಸ್ಥಾಪನೆಯ ಕನಸನ್ನು ಶಿವಾಜಿ ಮಹಾರಾಜರು ದೇಶದ ಪ್ರತಿಯೊಬ್ಬ ಹಿಂದುವಿನಲ್ಲೂ ಬಿತ್ತಿದ್ದರು. ಧರ್ಮರಕ್ಷಣೆಯೊಂದಿಗೆ ಧರ್ಮನಿಷ್ಠೆಯನ್ನೂ ನಾವು ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದರು. ಮಾತ್ರವಲ್ಲದೆ ದೇಶಪ್ರೇಮ, ದೇಶಭಕ್ತಿಯ ಮುಂದೆ ಎಲ್ಲವೂ ತೃಣಸಮಾನವೆಂದು ತಮ್ಮ ಜೀವನಾದ್ಯಂತ ತೋರಿಸಿಕೊಟ್ಟರು. ದೇಶಪ್ರೇಮ ಎನ್ನುವುದು ಕೇವಲ ಪ್ರಾಸಂಗಿಕ ಮಾತಾಗಿ ಉಳಿದಿರುವ ಈ ಕಾಲಘಟ್ಟದಲ್ಲಿ 400 ವರ್ಷಗಳ ಹಿಂದೆಯೇ ದೇಶಪ್ರೇಮದ ಬೀಜವನ್ನು ಬಿತ್ತಿ ಇಂದಿಗೂ ಪ್ರೇರಣೆಯಾಗಿ ನಿಂತಿರುವ ಛತ್ರಪತಿ ಶಿವಾಜಿ ಮಹಾರಾಜರೇ ನಮ್ಮೆಲ್ಲರ ಆದರ್ಶವಾಗಬೇಕಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕೆಕೆಎಂಪಿ ತಾಲೂಕು ಅಧ್ಯಕ್ಷ ಲೋಕನಾಥರಾವ್ ಕದಂ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀನಾಥ್ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮುಖಂಡರಾದ ಆಸ್ಪತ್ರೆ ಕಾವಲ್ ಗ್ರಾ.ಪಂ.ಅಧ್ಯಕ್ಷ ನಾಗೇಶ್ ಮೆಂಗಾಣಿ, ಜಾಬಗೆರೆ ಗ್ರಾ.ಪಂ.ಅಧ್ಯಕ್ಷೆ ಯಶೋಧಬಾಯಿ ಚವಾಣ್, ಗಾವಡಗೆರೆ ರೈತಸೇವಾ ಸಹಕಾರ ಸಂಘದ ಉಪಾಧ್ಯಕ್ಷ ವಿಠಲ್ ರಾವ್ ಪವಾರ್, ನಿರ್ದೇಶಕ ಹೊನ್ನಪ್ಪರಾವ್ ಕಾಳಿಂಗೆರನ್ನು ಸನ್ಮಾನಿಸಲಾಯಿತು. ವಕೀಲರಾದ ವೀರೇಶ್ ರಾವ್, ರತ್ನಪುರಿ ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಶ್ರೀನಾಥ್, ತುಳಸಿರಾಮ್, ಉಪಾಧ್ಯಕ್ಷ ಸುಬ್ಬರಾವ್ ಕದಂ, ಖಜಾಂಚಿ ಕೇತನ್‌ರಾವ್ ಚವ್ಹಾಣ್, ಸದಸ್ಯರಾದ ರಮೇಶ್ ರಾವ್ ಚವ್ಹಾಣ್, ಮಂಜುನಾಥ್, ದಿಲೀಪ್, ನಾಗೇಶ್‌ರಾವ್, ನಂಜುಂಡರಾವ್, ಮಹದೇವ್ ರಾವ್, ಪ್ರದೀಪ್, ಸಾಗರ್ ಮುಂತಾದವರು ಹಾಜರಿದ್ದರು.