ಬಿಡದಿ : ಪಟ್ಟಣದ ಈಗಿನ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸುವ ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾತನಾಡಿ, ಸದ್ಯಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗಬೇಕಿದೆ. ಈಗಿರುವ ಮೇಲ್ಸೇತುವೆಯಿಂದ ಪೂರ್ಣ ಪ್ರಮಾಣದಲ್ಲಿ ರೈಲು ಹಳಿಗಳನ್ನು ದಾಟಲು ಸಾಧ್ಯವಾಗುತ್ತಿಲ್ಲ. ಇದರ ವಿಸ್ತರಣೆ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಕೇವಲ ನಿಲ್ದಾಣದಲ್ಲಿ ಪ್ರಯಾಣಿಕರು ಹಳಿ ದಾಟಲು ಮೇಲ್ಸೇತುವೆ ನಿರ್ಮಾಣ ಮಾಡಿದರೆ ಸಾಲದು. ಪ್ರತಿನಿತ್ಯ ನೂರಾರು ಮಕ್ಕಳು, ಮಹಿಳೆಯರು, ರೋಗಿಗಳು, ವೃದ್ಧರು ಆಗಮಿಸುತ್ತಾರೆ. ಅವರೆಲ್ಲ ಮೆಟ್ಟಿಲು ಹತ್ತುವುದು, ಇಳಿಯುವುದು ಸುಲಭದ ಮಾತಲ್ಲ. ಹಾಗಾಗಿಯೇ ಲ್‌ಟಿ ಹಾಗೂ ಎಕ್ಸಲೇಟರ್‌ಗಳನ್ನು ಅಳವಡಿಕೆ ಮಾಡಬೇಕಿದೆ ಎಂದರು.
ಇದಕ್ಕೆ ಉತ್ತರಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು, ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗೆ 76 ಲಕ್ಷ ರೂ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂಸದರಿಗೆ ಮಾಹಿತಿ ನೀಡಿದರು.
ಇನ್ನಷ್ಟು ರೈಲುಗಳ ನಿಲುಗಡೆಗೆ ಪ್ರಯತ್ನ: ರೈಲು ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸುವದರ ಜತೆಗೆ ಕೆಲವು ರೈಲುಗಳು ಇಲ್ಲಿ ನಿಲುಗಡೆ ಮಾಡುತ್ತಿಲ್ಲ. ಹಾಗಾಗಿ ಈ ವಿಚಾರವಾಗಿ ರೈಲ್ವೆ ಖಾತೆ ಕೇಂದ್ರ ಸಚಿವರು ಹಾಗೂ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತುಕತೆ ಮಾಡಲಾಗುತ್ತದೆ ಎಂದರು.
ರೈಲಿನಿಂದ ಇಳಿದು ಹಳಿ ದಾಟಲು ಸೂಕ್ತ ವ್ಯವಸ್ಥೆ ಇಲ್ಲದೆ ಹಳಿಗಳ ಮೇಲೆ ನಿಂತ ಗೂಡ್ಸ್ ಗಾಡಿಗಳ ಬೋಗಿಗಳ ಕೆಳಗೆ ಪ್ರಯಾಣಿಕರು ಹಳಿ ದಾಟುವ ದೃಶ್ಯವನ್ನು ಗಮನಿಸಿ, ಸ್ಥಳದಲ್ಲೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದರು. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ಯುಗದಲ್ಲಿ ಪ್ರಯಾಣಿಕರು ರೈಲ್ವೆ ಬೋಗಿಗಳ ಅಡಿಯಲ್ಲಿ ತೂರಿ ಹೋಗುವ ಪರಿಸ್ಥಿತಿಯಿದೆ. ಇದನ್ನು ತಕ್ಷಣವೇ ಪರಿಹರಿಸಬೇಕು ಎಂದು ತಾಕೀತು ಮಾಡಿದರು.
ಅಂಡರ್ ಪಾಸ್ ನಿರ್ಮಾಣಕ್ಕೆ ಮನವಿ : ಪಟ್ಟಣದ ರೈಲ್ವೆ ನಿಲ್ದಾಣದಿಂದ ಬಾನಂದೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಂಡರ್‌ಪಾಸ್ ನಿರ್ಮಾಣದ ಅವಶ್ಯಕತೆ ಇದೆ ಎಂದು ಸ್ಥಳೀಯ ಮುಖಂಡರು ಸಂಸದರಲ್ಲಿ ಮನವಿ ಮಾಡಿದರು. ಮನವಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಂಸದರು, ರೈಲ್ವೆ ಇಲಾಖೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ನವೀನ್‌ಕುಮಾರ್, ನಾಗರಾಜು, ಸೋಮಶೇಖರ್, ಆಯಿಷಾ ಖಲೀಲ್, ಮನುಲೋಕೇಶ್, ಲಲಿತಾ ನರಸಿಂಹಯ್ಯ, ದಿಶಾ ಸಮಿತಿ ಸದಸ್ಯ ವಿ.ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಮುಖಂಡರಾದ ಪ್ರಸಾದ್‌ಗೌಡ, ಇಟ್ಟಮಡು ಸೋಮಣ್ಣ, ಶೇಷಪ್ಪ, ಚಿಕ್ಕಣ್ಣಯ್ಯ ಇತರರು ಇದ್ದರು.