ಜಿಲ್ಲೆ

ಸರ್ವರ ಒಳಿತಿಗಾಗಿ ಹೊರಬೀಡು ; ಕೊರಟಗೆರೆ ವಿವಿಧ ಗ್ರಾಮಗಳ ವಿಶಿಷ್ಟ ಆಚರಣೆ

Tumakuru

ಕೊರಟಗೆರೆ : ಊರಿಗೆ ಊರೇ ನಿಶಬ್ಧವಾಗಿತ್ತು... ಜನ, ದನ, ಕರು ಸೇರಿ ಜೀವ ಸಂಕುಲವೇ ಅಲ್ಲಿಂದ ತೆರಳಿತ್ತು... ಶನಿವಾರ ಇಡೀ ಗ್ರಾಮವೇ ಮನೆಗಳನ್ನು ತೊರೆದು ಹೊರಗೆ ಒಟ್ಟಾಗಿ ಸೇರಿದ್ದರು... 500ಕ್ಕೂ ಹೆಚ್ಚು ಕುಟುಂಬಗಳು ಮನೆಗಳಿಗೆ ಬೀಗಹಾಕಿ ದಿನಪೂರ್ತಿ ಜಮೀನುಗಳಲ್ಲಿ ಕಳೆದವು...

ಹೌದು, ತಾಲೂಕಿನ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಹಲವು ಬುಡಕಟ್ಟು ಜನಾಂಗದ ಗೊಲ್ಲರಹಳ್ಳಿ, ಶ್ರೀನಿವಾಸಪುರ, ಮಾರುತಿನಗರ, ಹೊಸಪಾಳ್ಯ, ಬುಕ್ಕಾಪಟ್ಟಣ ಸೇರಿ ಹಲವು ಗ್ರಾಮಸ್ಥರು ‘ಹೊರಬೀಡು’ ಆಚರಿಸುತ್ತವೆ. ಎಲ್ಲರ ಒಳಿತಿಗೆ ಹಾರೈಸಿ ಮೂರು ವರ್ಷಗಳಿಗೊಮ್ಮೆ ಒಂದು ದಿನ ಮನೆಗಳಿಂದ ಜನರು ಹೊರಗುಳಿಯುತ್ತಾರೆ. ನೂರಾರು ವರ್ಷಗಳಿಂದ ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ, ಶನಿವಾರ ಗ್ರಾಮಸ್ಥರೆಲ್ಲರೂ ತಮ್ಮ ಮನೆಗಳಿಗೆ ಬೀಗ ಹಾಕಿ ಜಮೀನುಗಳಲ್ಲಿ ದಿನ ಕಳೆದರು.

ಈ ಆಚರಣೆ ತುಮಕೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಆಚರಿಸಲ್ಪಡುತ್ತದೆ. ಅದರಂತೆ ಕೊರಟಗೆರೆ ತಾಲೂಕಿನ ಐದು ಗ್ರಾಮಗಳ ಜನರು ಆಚರಿಸಿದರು.

ಶೂನ್ಯ ಮಾಸದಲ್ಲಿ ಈ ಆಚರಣೆ ನಡೆಯುತ್ತದೆ. ಈ ಬಾರಿ 550ಕ್ಕೂ ಹೆಚ್ಚು ಕುಟುಂಬದ 3 ಸಾವಿರ ಜನರು ಮನೆಗಳನ್ನು ತೊರೆದು, ಗ್ರಾಮದ 2 ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ ಊರು ಬಿಟ್ಟಿದ್ದರು. ಇದರಿಂದ ಶುಕ್ರವಾರ ಮುಂಜಾನೆ 5ರಿಂದ ಸಂಜೆ 6ರವರೆಗೆ ಗ್ರಾಮಗಳು ಬಿಕೋ ಎನ್ನುತ್ತಿದ್ದವು.

ಬೆಳಗ್ಗೆಯಿಂದ ಸಂಜೆಯವರೆಗೂ ಗ್ರಾಮದೊಳಗೆ ಯಾರೂ ಪ್ರವೇಶಿದಂತೆ ಕಾವಲು ಕಾದರು. ಗ್ರಾಮ ದೇವತೆ ಮಾರಮ್ಮದೇವಿ ಊರನ್ನು ಸುತ್ತುವುದಲ್ಲದೇ ಕಾವಲು ಕಾಯುತ್ತಾಳೆ ಎಂಬ ನಂಬಿಕೆ ಜನರದ್ದಾಗಿದೆ.

ಸಂಜೆ 6ರ ನಂತರ ಬುಕ್ಕಾಪಟ್ಟಣದ ಹೊರಗೆ ಗುಡಿಸಲು ಹಾಕಿ ಮಾರಮ್ಮ ದೇವಿ ಪ್ರತಿಷ್ಠಾಪಿಸಿ ಪ್ರತಿಯೊಬ್ಬರೂ ಪೂಜೆ ಸಲ್ಲಿಸಿದರು. ನಂತರ ತಮ್ಮ ಜಮೀನುಗಳಲ್ಲಿ ಗುಡಿಸಲು ಹಾಕಿ ಕೊಂಡು ಆಹಾರ ತಯಾರಿಸಿ ಸೇವಿಸಿದರು. ಸಂಬಂಧಿಕರನ್ನೂ ಆಹ್ವಾನಿಸಿ, ಔತಣ ನೀಡಿದರು.

ಗೋಧೂಳಿಯಲ್ಲಿ ಪುರಪ್ರವೇಶ: ಗೋಧೂಳಿ ಸಮಯದಲ್ಲಿ ಗ್ರಾಮ ದೇವತೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ರಣಬಲೆ, ಕೋಬಲೆ ಎಂದು ಕೂಗುತ್ತಾ ಸಾಂಪ್ರದಾಯಿಕವಾಗಿ ಪುರಪ್ರವೇಶ ಮಾಡಿದರು. ಪ್ರತಿ ಮನೆಯ ಬಾಗಿಲಿಗೆ ಪೂಜೆ ಸಲ್ಲಿಸಿ, ಮನೆ ಸುತ್ತಮುತ್ತ ಮೊಸರನ್ನ ಎಡೆ ಹಾಕಿದರು. ಬಳಿಕ ಮನೆ ಹೊಕ್ಕರು.

ಶಾಲೆಗಳಿಗೂ ರಜೆ ಘೋಷಣೆ: ಹೊರಬೀಡು ಆಚರಣೆ ನಿಮಿತ್ತ ಗ್ರಾಮಗಳ ಶಾಲೆ, ಕಚೇರಿಗಳಿಗೆ ಶನಿವಾರ ರಜೆ ೋಷಿಸಲಾಗಿತ್ತು. ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಶ್ರೀನಿವಾಸಪುರ, ಮಾರುತಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಕಂದಾಯ ಇಲಾಖೆ, ಬುಕ್ಕಾ ಪಟ್ಟಣ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಪಾಲನಾ ಇಲಾಖೆ ಬಾಗಿಲಿಕ್ಕಿಕೊಂಡಿದ್ದವು.

ಸಸ್ಯಹಾರ, ಮಾಂಸಹಾರಕ್ಕೂ ಅವಕಾಶ! ; ನೆರೆಹೊರೆಯ ಐದು ಗ್ರಾಮಗಳು ಹಬ್ಬ ಆಚರಿಸುವುದರಿಂದ ಗ್ರಾಮದ ಪ್ರಮುಖರೆಲ್ಲರೂ ಸೇರಿ ಸಭೆ ಸೇರಿ 15 ದಿನ ಮೊದಲೇ ಹೊರಬೀಡು ದಿನಾಂಕ ನಿಗದಿಪಡಿಸಿ ಡಂಗೂರ ಸಾರಿಸಿದ್ದರು. ಮಾರಮ್ಮ ದೇವಿಗೆ ವಿಶೇಷ ಪೂಜೆ ಮಾಡಿ, ಬಲಿ ಅನ್ನವನ್ನು ಗ್ರಾಮದ ಸುತ್ತ ಹಾಕಲಾಯಿತು. ನಂತರ ಗ್ರಾಮ ಬಿಟ್ಟು ಹೊರಬೀಡು ಹೋದವರಿಗೆ ಮತ್ತೆ ಗ್ರಾಮಕ್ಕೆ ಬರಲು ಅವಕಾಶ ಮಾಡಿಕೊಡಲಾಯಿತು. ಸಸ್ಯಹಾರ ಅಥವಾ ಮಾಂಸಾಹಾರ ಎನ್ನದೆ ಎಲ್ಲರೂ ಈ ಆಚರಣೆಯಲ್ಲಿ ಒಟ್ಟಾಗಿ ಪಾಲ್ಗೊಂಡು ಅವರವರ ಆಹಾರ ಪದ್ಧತಿಯಂತೆ ಮಾರಿಗೆ ಎಡೆ ಮಾಡಿದರು.