ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಜನತೆ ಪ್ರತಿಭಾವಂತರಾಗಿದ್ದು, ಹಿಂದುಳಿದಿದ್ದೇವೆ ಎಂಬ ಕೀಳರಿಮೆ ಬಿಟ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ಭಾಗದಿಂದ ದೇಶದ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅವರನ್ನೆಲ್ಲ ಸ್ಫೂರ್ತಿಯಾಗಿಟ್ಟುಕೊಂಡು ಹಿಂದುಳಿದ ಪ್ರದೇಶದವರೆಂಬ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸ್ವಯಂ ಬೆಳೆಯಬೇಕು. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಐಟಿ ಕ್ಷೇತ್ರವನ್ನು ವಿಸ್ತರಿಸುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದ್ದು, ಅನೇಕ ಕಾರ್ಖಾನೆಗಳು, ಕೈಗಾರಿಕೆಗಳು ಬರುತ್ತಿವೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ಎಚ್.ವಿಶ್ವನಾಥ ರಡ್ಡಿ, ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ.ಮಾರುತಿ, ತಾಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಇರರಿದ್ದರು.
ಜಿಲ್ಲಾಡಳಿತದಿಂದ ಆಚರಣೆ: ನಗರದ ಜಿಲ್ಲಾಡಳಿತ ಭವನದಲ್ಲಿ ಕಕ ಉತ್ಸವ ಅಂಗವಾಗಿ ಗುರುವಾರ ಡಿಸಿ ಎಸ್.ವಿಕಾಸ್ ಕಿಶೋರ್ ಧ್ವಜಾರೋಹಣ ನೆರವೇರಿಸಿದರು. ಜಿಪಂ ಉಪಕಾರ್ಯದರ್ಶಿ ಶರಣಬಸವ, ಯೋಜನಾ ನಿರ್ದೇಶಕ ಟಿ.ಕೃ?್ಣಮೂರ್ತಿ, ಡಿಎಚ್‌ಒ ಡಾ.ಲಿಂಗರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.