ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿಗೆ ಹಾವೇರಿ ಠೇವಣಿದಾರರು ಮುತ್ತಿಗೆ ಹಾಕಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕಿತ್ತೂರು ರಾಣಿ ಚನ್ನಮ್ಮಬ್ಯಾಂಕ್‌ಗೆ ಮುತ್ತಿಗೆ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿ ಎದುರು ಹಾವೇರಿ ಶಾಖೆಯ ನೂರಾರು ಠೇವಣಿದಾರರು ತಮ್ಮ ಠೇವಣಿ ಹಣ ಮರುಪಾವತಿಸಬೇಕು ಎಂದು ಒತ್ತಾಯಿಸಿ, ನಿರ್ದೇಶಕರುಗಳಿಗೆ ಘೇರಾವ್ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಹಕಾರಿಯು ಕಳೆದ ಎರಡು ತಿಂಗಳಿನಿಂದ ಠೇವಣಿದಾರರಿಗೆ ಠೇವಣಿ ಹಣ ಮರಳಿಸಲು ವಿಫಲವಾಗಿದ್ದರಿಂದ ಠೇವಣಿದಾರರು ಬ್ಯಾಂಕಿಗೆ ಆಗಮಿಸಿ ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ. ಇಂದು ಹಾವೇರಿ ಶಾಖೆಯ ಸುಮಾರು 22 ಕೋಟಿ ರೂ. ಹಣ ಠೇವಣಿ ಮಾಡಿದ ಠೇವಣಿದಾರರು ಒಗ್ಗೂಡಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದರು. ಇದೇ ವಿಷಯ ಕುರಿತು ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಶಾಖೆಯಲ್ಲಿ ಠೇವಣಿದಾರರು ಸಿಬ್ಬಂದಿಗಳನ್ನು ಶಾಖೆಯಲ್ಲಿ ಕೂಡಿ ಹಾಕಿ ಶಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕ್ಯಾನ್ಸರ್ ಪೀಡಿತ ಬಾಲಕಿ ಚಿಕಿತ್ಸೆಗೂ ಹಣ ನೀಡಿಲ್ಲ: ಹಾವೇರಿ ಪಟ್ಟಣದ ಪ್ರಿಯಾಂಕಾ ಹಿರೇಗೌಡರ ಎಂಬ 12 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿ ರೋಧನ ಕರುಳು ಹಿಂಡುವಂತಿತ್ತು. ತಂದೆ ಕಳೆದುಕೊಂಡಿರುವ ಬಾಲಕಿಯ ಕುಟುಂಬಕ್ಕೆ ಸೇರಿದ 1.5 ಎಕರೆ ಜಮೀನು ಮಾರಿ 10 ಲಕ್ಷ ರೂ. ಠೇವಣಿ ಇಟ್ಟು ಬಂದ ಬಡ್ಡಿಯ ಹಣದಲ್ಲಿ ಉಪ ಜೀವನ ಸಾಗಿಸುತ್ತ ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗ ಏಕಾಏಕಿ ಎರಡು ತಿಂಗಳಿನಿಂದ ಅವಳಿಗೆ ಬಡ್ಡಿ ಪಾವತಿಸದ ಕಾರಣ ಚಿಕಿತ್ಸೆಗೆ ಹಣ ಇಲ್ಲದ್ದರಿಂದ ಬಾಲಕಿಯ ಆರೋಗ್ಯ ಬಿಗಡಾಯಿಸಿದೆ. ಈ ಕುರಿತು ಅಧ್ಯಕ್ಷ ಡಾ.ವಿ.ಎಸ್.ಸಾಧುನವರ ಅವರಿಗೆ ಹಾವೇರಿ ಪಟ್ಟಣ ಜನತೆ ಬಾಲಕಿಗೆ ಒಂದು ಲಕ್ಷ ಹಣವಾದರೂ ನೀಡಿ ಎಂದು ಹೇಳಿದ್ದರು. ಮಾತು ಕೊಟ್ಟು ಬಂದ ಅಧ್ಯಕ್ಷರು ಇದುವರೆಗೆ ಏನು ಕ್ರಮ ಕೈಕೊಳ್ಳದ್ದರಿಂದ ಬಾಲಕಿಗೆ ದ್ರೋಹ ಬಗೆದಿದ್ದಾರೆ ಎಂದು ಬಾಲಕಿ ಹಾಗೂ ಠೇವಣಿದಾರರು ಆರೋಪಿಸಿದರು.