ಬಂಟ್ವಾಳ: ಸೇವಾ ಕಾರ್ಯಗಳಿಗೆ ಮನಸ್ಸು ಅತಿ ಮುಖ್ಯವಾಗಿದ್ದು, ಆಗ ನಾವು ಮಾಡಿದ ಸೇವೆ ಸಾರ್ಥಕವಾಗುತ್ತದೆ. ಸೇವಾ ಕಾರ್ಯಗಳಲ್ಲಿ ಸೇವಾಂಜಲಿಯ ಹೆಸರು ಮುಂಚೂಣಿಯಲ್ಲಿದ್ದು, ನಿಕ್ಷಯ ಮಿತ್ರ ಯೋಜನೆಯ ಆರಂಭದಿಂದಲೂ ಬೆಂಬಲವಾಗಿ ನಿಂತ ಸಂಸ್ಥೆ ಕ್ಷಯಮುಕ್ತ ಭಾರತ ಯೋಜನೆಗೆ ಬಲುದೊಡ್ಡ ಕೊಡುಗೆ ನೀಡಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸಂಜಿತ್ ಎಸ್.ಶೆಟ್ಟಿ ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ಧವಸ ಧಾನ್ಯಗಳನ್ನೊಳಗೊಂಡ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಕ್ಷಯ ರೋಗದ ನಿಯಂತ್ರಣ ಪ್ರಮಾಣ ವಾರ್ಷಿಕ 2 ಶೇ.ದಷ್ಟಿದ್ದು, ಅದನ್ನು 90 ಶೇ. ಏರಿಸಬೇಕು ಎಂಬ ಗುರಿಯೊಂದಿಗೆ ಸರ್ಕಾರ ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಮಾತನಾಡಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಫರಂಗಿಪೇಟೆ ಶಾಖೆ ಮ್ಯಾನೇಜರ್ ರೂಪಲತಾ, ಲಯನ್ಸ್ ಕಾರ್ಯದರ್ಶಿ ಮನೋರಂಜನ್ ಕರೈ, ಧಾರ್ಮಿಕ ಮುಂದಾಳು ಉಮೇಶ್ ಸಾಲ್ಯಾನ್ ಬೆಂಜನಪದವು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷ್ಣ ತುಪ್ಪೆಕಲ್ಲು, ಬಿ.ನಾರಾಯಣ ಮೇರಮಜಲು, ಶಿವರಾಜ್ ಸುಜೀರು, ವಿಕ್ರಂ ಬರ್ಕೆ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಉಮಾ ಚಂದ್ರಶೇಖರ್, ಗಾಯತ್ರಿ, ಉಮೇಶ್ ಆಚಾರ್ ಉಪಸ್ಥಿತರಿದ್ದರು. ಟ್ರಸ್ಟಿ ಬಿ.ದೇವದಾಸ್ ಶೆಟ್ಟಿ ಕೊಡ್ಮಾಣ್ ಸ್ವಾಗತಿಸಿ, ವಂದಿಸಿದರು.