ಜಿಲ್ಲೆ

ಗಣತಿದಾರರಿಗೆ ಮಾಹಿತಿ ಕಿಟ್ ವಿತರಣೆ

ಎ. ಆರ್. ರಘುರಾಮ

ಕೆ.ಎಂ.ದೊಡ್ಡಿ : ನಿಖರ ಮಾಹಿತಿಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಸಿಬ್ಬಂದಿಗೆ ನೀಡುವ ಮೂಲಕ ಸಹಕರಿಸಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಗುರುದೇವರಹಳ್ಳಿ ಗ್ರಾಮದಲ್ಲಿ ಸಮೀಕ್ಷೆಗೆ ಚಾಲನೆ ನೀಡಿ ಗಣತಿದಾರರಿಗೆ ಆಗತ್ಯ ಮಾಹಿತಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಹಲವು ಮಾರ್ಪಾಡು ಮಾಡಿ ನಿಖರ ಸಮೀಕ್ಷೆ ನಡೆಸುವಂತೆ ಆದೇಶ ಮಾಡಿದ್ದು ಅದರಂತೆ ಸಹಕರಿಸಿ ಎಂದು ಕೋರಿದರು. ಸಮೀಕ್ಷೆ ಎಂಬುದು ಯಾವುದೇ ಒಂದು ಜಾತಿಗೆ ಸಿಮೀತವಾಗಿಲ್ಲ ಸಾಮೂಹಿಕವಾಗಿ ಎಲ್ಲ ಜಾತಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಜಾತಿ ಗಣತಿಯನ್ನು ಸಹಿಸುತ್ತಿಲಲ ಎಂದು ದೂರಿದರು.

ಪ್ರತಿ ಜಾತಿಯ ಮುಖಂಡರು, ಸ್ವಾಮೀಜಿಗಳು ಸಭೆ ನಡೆಸಿ ಅವರವರ ತೀರ್ಮಾನಗಳನ್ನು ಸರ್ಕಾರಕ್ಕೆ

ತಿಳಿಸಿದ್ದಾರೆ. ಆಯೋಗವು ಸಮಗ್ರವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸತ್ಯವಾದ ಮಾಹಿತಿ ನೀಡಬೇಕು ಎಂದರು.

ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಮದ್ದೂರು ತಾಲೂಕಿನಲ್ಲಿ ಈಗಾಗಲೇ 90 ಸಾವಿರ ಚೀಟಿಗಳನ್ನು ಮನೆಗಳಿಗೆ ಅಂಟಿಸಿದ್ದು, 754 ಗಣತಿದಾರರನ್ನು ನೇಮಕ ಮಾಡಲಾಗಿದೆ. ಒಬ್ಬ ಗಣತಿದಾರರಿಗೆ 150 ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮನೆ ವಿಳಾಸ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಒಟ್ಟು ಸದಸ್ಯರು, ಧರ್ಮ, ಜಾತಿ, ಉಪಜಾತಿ, ಜಾತಿ ವರ್ಗ, ಜಾತಿ ಪ್ರಮಾಣ ಪತ್ರ, ಪತ್ರ ಸಂಖ್ಯೆ, ಜನ್ಮ ದಿನಾಂಕ, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ ಜನ್ಮ ಸ್ಥಳ, ವಿದ್ಯಾಭ್ಯಾಸ, ಮನೆಯ ಮುಖ್ಯ ಉದ್ಯೋಗ ಸೇರಿದಂತೆ ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುವುದು. ಅದಕ್ಕೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಕೋರಿದರು.

ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಜಿ.ಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಕಂದಾಯ ನಿರೀಕ್ಷಕ ರವೀಂದ್ರ, ಪಿಡಿಒ ಲತಾಮಣಿ, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಸುನೀತಾ ಮತ್ತಿತರರು ಇದ್ದರು.