ಜಿಲ್ಲೆ

ದಿನಸಿ ಕಿಟ್ ವಿತರಣೆ ಗೋಲ್‌ಮಾಲ್ ; ತಿಪಟೂರಿನಲ್ಲಿ ಕೂಲಿ ಕಾರ್ಮಿಕರ ಆಕ್ರೋಶ ; ಟೋಕನ್‌ಗೂ ಲಂಚ

Tumakuru

ತಿಪಟೂರು : ಕಾರ್ಮಿಕರ ಕಲ್ಯಾಣ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ದಿನಸಿ ಕಿಟ್ ವಿತರಣೆಯಲ್ಲಿ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನಲ್ಲಿ ನೋಂದಾಯಿತ 6 ಸಾವಿರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದು, ಮಂಗಳವಾರ ಮಿನಿವಿಧಾನಸೌಧದ ಕಚೇರಿ ಆವರಣದಲ್ಲಿ ಇಲಾಖೆಯಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಕಿಟ್ ಪಡೆಯಲು ಬಂದ ಅನೇಕರಿಗೆ ನಿರಾಸೆಯಾಗಿದೆ. ಹೆಸರು ನೋಂದಾಯಿಸಿಲ್ಲ. ಪ್ರಸಕ್ತ ಸಾಲಿಗೆ ನವೀಕರಣ ಮಾಡಿಸಿಲ್ಲ ಎಂದು ಕೆಲವರನ್ನು ವಾಪಸ್ ಕಳುಹಿಸಿದರೆ, ಎಲ್ಲ ಸರಿ ಇದ್ದರೂ ಅವರು ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೆಲವರಿಗೆ ಕಿಟ್ ನೀಡಲಿಲ್ಲ. ಕೆಲ ದಲ್ಲಾಳಿಗಳು ಕಿಟ್ ಪಡೆಯುವ ಟೋಕನ್‌ಗೆ 100 ರಿಂದ 200 ರೂಪಾಯಿ ಕೊಟ್ಟವರ ಹೆಸರು ಶಿಫಾರಸು ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನವಳ್ಳಿ ಹೋಬಳಿ ನಾಗತಿಹಳ್ಳಿಯ ಗಂಗಮ್ಮ ಕುಟುಂಬದ ಲೇಬರ್ ಕಾರ್ಡ್ ನವೀಕರಿಸಲು ಹೋದಾಗ 2 ಸಾವಿರ ರೂಪಾಯಿ ಬೇಡಿಕೆ ಇಟ್ಟ ಇಲಾಖೆಯ ಸಿಬ್ಬಂದಿ, ಕಡೆಗೆ ಈಕೆಯಿಂದ 1 ಸಾವಿರ ರೂಪಾಯಿ ಪಡೆದಿದ್ದಾರೆ. ಹಣ ಕೊಟ್ಟರೂ ಕಾರ್ಡ್ ಕೈಸೇರದ ಕಾರಣ ಕಚೇರಿಗೆ ಹೋದರೆ ಕಾರ್ಡ್ ಮುಗಿದಿದೆ. ಸರ್ವರ್ ಸರಿ ಇಲ್ಲ. ಆನ್‌ಲೈನ್ ದೋಷವಿದೆ ಎಂಬ ಕಾರಣ ಹೇಳಿ ವಾಪಸ್ ಕಳುಹಿಸಿದ್ದಾರೆ. ಮಕ್ಕಳೊಂದಿಗೆ ದಿನಸಿ ಕಿಟ್ ಪಡೆಯಲು ಬಂದು ಕಂಡಕಂಡವರಲ್ಲಿ ಗೋಳು ಹೇಳಿಕೊಳ್ಳುತ್ತಿರುವ ಗಂಗಮ್ಮನ ಸ್ಥಿತಿಯನ್ನೇ ಇತರರೂ ಅನುಭವಿಸುತ್ತಿದ್ದಾರೆ.

ದೃಷ್ಟಿ ಹೀನನಾಗಿರುವ ಕೆರೆಗೋಡಿ ನಿವಾಸಿ ಶಿವಪ್ಪ ಅವರ ಪತ್ನಿಯದ್ದೂ ಇದೇ ಕಥೆ..ಕಾರ್ಡ್ ನವೀಕರಣಕ್ಕೆ ಒಂದು ಸಾವಿರ ರೂಪಾಯಿ ಕೊಟ್ಟು 6 ತಿಂಗಳಾದರೂ ಕಾರ್ಡ್ ಸಿಕ್ಕಿಲ್ಲ. ಕೆಲವರ ದಾಖಲೆಗಳು ಸರಿ ಇದ್ದರೂ, ಪೂರ್ವ ನಿರ್ಧಾರವಾದಂತೆ ಹಣ ಕೊಟ್ಟವರಿಗೆ ಟೋಕನ್ ನಂಬರ್ ಬರೆದು ಕೊಡಲಾಗುತ್ತಿದೆ. ಟೋಕನ್‌ನಲ್ಲಿ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ, ಕರೊನಾ ಪ್ರಯುಕ್ತ ದಿನಸಿ ಕಿಟ್ ವಿತರಣೆ, ಪಾವಗಡ ತಾಲೂಕು, ತುಮಕೂರು ಜಿಲ್ಲೆ ಎಂದು ನಮೂದಾಗಿದ್ದು, ಪಾವಗಡ ತಾಲೂಕಿನ ಕಾರ್ಡ್ ತಿಪಟೂರು ತಾಲೂಕಿಗೆ ಹೇಗೆ ಬಂತು ಎಂಬುದು ಗೊತ್ತಾಗಬೇಕಿದೆ.

ಈ ಹಿಂದೆ ಇದ್ದ ಕಾರ್ಮಿಕ ಅಧಿಕಾರಿ ಪಾವಗಡ ತಾಲೂಕಿನಲ್ಲೂ ಹೆಚ್ಚುವರಿ ಅಧಿಕಾರಿ ಆಗಿದ್ದರು, ಹಾಗಾಗಿ ಅಲ್ಲಿನ ಕಾರ್ಡ್ ಇವರ ಬಳಿ ಉಳಿದಿರಬಹುದು. ಅವರ ಅವಧಿಯಲ್ಲಿ ತಿಪಟೂರಿಗೆ ಬಂದಿದ್ದ 5 ಸಾವಿರ ದಿನಸಿ ಕಿಟ್‌ಗಳ ಪೈಕಿ ಎರಡೂವರೆ ಸಾವಿರ ಕಿಟ್ ಉಳಿದಿದ್ದು. ತಹಸೀಲ್ದಾರ್ ಕಚೇರಿಯಿಂದ ಬಂದಿರುವ ಲಿಸ್ಟ್ ಪ್ರಕಾರ 250 ಅರ್ಹ ಕಟ್ಟಡ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ. ಹಣ ಪಡೆದು ಟೋಕನ್ ಕೊಡುತ್ತಿರುವುದು ಗಮನಕ್ಕೆ ಬಂದಿಲ್ಲ. ಜಯಪ್ರಕಾಶ್, ಕಾರ್ಮಿಕ ಇಲಾಖೆ ಅಧಿಕಾರಿ ತಿಪಟೂರು ಕರೊನಾ ತಪಾಸಣೆಗಾಗಿ ಸ್ವಾಬ್ ಸಂಗ್ರಹಕ್ಕೆ ತಾಲೂಕು ಕಚೇರಿ ವತಿಯಿಂದ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ನಮ್ಮ ಕಚೇರಿಯಲ್ಲಿ ದಿನಸಿ ಕಿಟ್ ಇಟ್ಟಿರುವುದು ಬಿಟ್ಟರೆ, ವಿತರಣೆ ಅವರ ಜವಾಬ್ದಾರಿ. ಆರ್.ಜಿ.ಚಂದ್ರಶೇಖರ್, ತಹಸೀಲ್ದಾರ್ ತಿಪಟೂರು