ಉಡುಪಿ: ಹಿರಿಯಡ್ಕ ಪೇಟೆಯಲ್ಲಿ ಇತ್ತೀಚೆಗೆ ಹಾಡುಹಗಲೇ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು ಒಂಬತ್ತಕ್ಕೇರಿದೆ. ಕಾಟಿಪಳ್ಳ ಒಂದನೇ ಬ್ಲಾಕ್ ನಿವಾಸಿಗಳಾದ ಸಂಜಿತ್ ಪ್ರದಾನ್ ಯಾನೆ ಶೈಲೇಶ್(19), ಸಚಿನ್ ಡಿ.ಅಮೀನ್(37), ಮೂರನೆ ಬ್ಲಾಕ್‌ನ ಅಕ್ಷಯ್ ಶೆಟ್ಟಿಗಾರ್(26), ಜೋಕಟ್ಟೆಯ ಚೇತನ್ ಯಾನೆ ಚೇತು (23) ಬಂಧಿತರು. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಬ್ರಹ್ಮಾವರ ಎಸ್ಸೈ ರಾಘವೇಂದ್ರ ಸಿ. ನೇತೃತ್ವದ ವಿಶೇಷ ತಂಡ ಶುಕ್ರವಾರ ಸುರತ್ಕಲ್ ಸಮೀಪ ಆರೋಪಿಗಳನ್ನು ಬಂಧಿಸಿದೆ.
ಸಚಿನ್ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಅಪರಾಧ ಪ್ರಕರಣಗಳಿವೆ. ಕೃತ್ಯಕ್ಕೆ ಬಳಸಿದ ಮೂರು ಕಾರು, ಎರಡು ಪಲ್ಸರ್ ಬೈಕ್, ಮಂಡೆ ಕತ್ತಿ, ಸುತ್ತಿಗೆ, ತಲವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಈಗಾಗಲೆ ಬಂಧಿತರ ಪೈಕಿ ಮೂವರು ನ್ಯಾಯಾಂಗ ಬಂಧನ, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಎಸ್ಸೈ ಕೃಷ್ಣಪ್ಪ, ಠಾಣೆ ಸಿಬ್ಬಂದಿ ಪ್ರದೀಪ್ ನಾಯಕ್, ವಾಸುದೇವ, ಗಣೇಶ್, ರವೀಂದ್ರ, ದಿಲೀಪ್, ಸಿಬ್ಬಂದಿ ಹರೀಶ್, ಶಿವರಾಜ್ ಚಾಲಕರಾದ ಶೇಖರ್ ಅಣ್ಣಪ್ಪ ಮತ್ತು ಡಿಸಿಐಬಿ ತಂಡದ ಎಸ್ಸೈ ರವಿಚಂದ್ರ, ಸಿಬ್ಬಂದಿ ರಾಮು ಹೆಗ್ಡೆ, ರಾಘವೇಂದ್ರ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.