ಜಿಲ್ಲೆ

ಹಲವು ರೈತರಿಗೆ ತಲುಪಿಲ್ಲ ಕಿಸಾನ್ ಸಮ್ಮಾನ್ ;  1,86,369 ಮಂದಿ ನೋಂದಣಿಯೇ ಮಾಡಿಸಿಲ್ಲ ; ಯೋಜನೆಯ ಅರಿವು ಮೂಡಿಸಬೇಕಿದೆ ಸರ್ಕಾರ

Tumakuru

ತುಮಕೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇನ್ನೂ 1,86,369 ರೈತರು ನೋಂದಣಿ ಮಾಡಿಸದ ಕಾರಣ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ 5,15,663 ರೈತರಿದ್ದು, ಇಲ್ಲಿಯವರೆಗೆ 3,29,294 ಮಂದಿ ನೋಂದಾಯಿಸಿಕೊಂಡಿದ್ದು, ಇನ್ನೂ ನೋಂದಾಯಿಸದೇ ಇರುವ ರೈತರು ಕೂಡಲೇ ನೋಂದಾಯಿಸಿಕೊಳ್ಳಬೇಕಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸುವ ಮೂಲಕ ಯೋಜನೆಯನ್ನು ತಲುಪಿಸಬೇಕಿದೆ.

ರೈತರೂ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ರೈತರು ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ನೆರವಾಗುವ ಉದ್ದೇಶದಿಂದ ಸಾಗುವಳಿ ಭೂಮಿ ಹೊಂದಿರುವ ಎಲ್ಲ ರೈತ ಕುಟುಂಬಕ್ಕೆ ವಾರ್ಷಿಕ 6000ರೂ. ಆರ್ಥಿಕ ನೆರವು ಮೂರು ಕಂತುಗಳಲ್ಲಿ ಪಡೆಯುವ ಸೌಲಭ್ಯವಿರುತ್ತದೆ. ರಾಜ್ಯ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆಯ ರೈತರಿಗೆ 2019ರ ಆಗಸ್ಟ್ 14ರಿಂದ ಹೆಚ್ಚುವರಿಯಾಗಿ 4000ರೂ. ಆರ್ಥಿಕ ನೆರವು ಲಭ್ಯವಾಗುತ್ತಿದೆ.

ಸರ್ಕಾರಿ ನೌಕರರು ಹಾಗೂ ಮಾಸಿಕ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ವಯೋ ನಿವೃತ್ತ, ನಿವೃತ್ತ ಪಿಂಚಣಿದಾರರು, ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು, ವೈದ್ಯ, ಅಭಿಯಂತ, ವಕೀಲ, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪಿಗಳಂತಹ ವೃತ್ತಿಪರರು ಮತ್ತು ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಸದರಿ ವೃತ್ತಿ ಕೈಗೊಳ್ಳುವವರು ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಈವರೆಗೂ ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿಸದೇ ಇರುವ ಅರ್ಹ ರೈತರು ಸ್ವಯಂ ಘೋಷಣಾ ಪತ್ರ, ಎಲ್ಲ ಸರ್ವೇ ನಂಬರ್‌ಗಳ ಪಹಣಿ, ಆಧಾರ್ ಜೆರಾಕ್ಸ್, ಪ್ರತಿ ಬ್ಯಾಂಕ್ ಪಾಸ್‌ಬುಕ್ ಪ್ರತಿಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ರಾಜಸುಲೋಚನ, ಜಂಟಿ ಕೃಷಿ ನಿರ್ದೇಶಕಿ