ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ‘ಮೈಸೂರು ಮಲ್ಲಿಗೆ’ ಚಿರಪರಿಚಿತ. ಆದರೆ, ‘ಮೈಸೂರು ಮಲ್ಲಿಗೆ’ ಭತ್ತದ ತಳಿಯ ಹೆಸರನ್ನು ಕೇಳಿದವರು ಅಪರೂಪ. ಇಂತಹ ಅಪರೂಪದ ಭತ್ತದ ತಳಿಯನ್ನು ನೋಡಬೇಕಾದರೆ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ (ನ.13ರವರೆಗೆ) ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನಕ್ಕೆ ಭೇಟಿ ನೀಡಬೇಕು.
ಸುಸ್ಥಿರ ಸಮಗ್ರ ಕೃಷಿಗಾಗಿ ಮೈತ್ರಿ ಸಂಸ್ಥೆ (ಆಶ) ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ 23 ರಾಜ್ಯಗಳಿಂದ ಎರಡು ಸಾವಿರಕ್ಕೂ ಹೆಚ್ಚು ಕೃಷಿಕರು ಆಗಮಿಸಿದ್ದಾರೆ. 18 ರಾಜ್ಯಗಳ 140 ಕೃಷಿ ಬಿತ್ತನೆ ಬೀಜ ಸಂರಕ್ಷರು 65 ಮಳಿಗೆಗಳನ್ನು ತೆರೆದು ತಮ್ಮ ರಾಜ್ಯದಲ್ಲಿ ಬೆಳೆಯುವ ಬೆಳೆಗಳ ಬಿತ್ತನೆ ಬೀಜಗಳ ಪ್ರದರ್ಶನ ಹಾಗೂ ಮಾರಾಟವನ್ನು ಮಾಡುತ್ತಿದ್ದಾರೆ. ವಾಣಿಜ್ಯ ಮಳಿಗೆಗಳು ಸೇರಿದಂತೆ ಒಟ್ಟು 110 ಮಳಿಗೆಗಳನ್ನು ತೆರೆಯಲಾಗಿದೆ. ನಗರದ ಬಹುತೇಕ ಜನರು ಕಂಡು ಕೇಳರಿಯದಂತಹ ಅಪರೂಪದ ವಿವಿಧ ತಳಿಗಳ ಬೀಜಗಳನ್ನು ಇಲ್ಲಿ ಕಾಣಬಹುದು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರಿನ ಶರಣ ಮುದ್ದಣ್ಣ ಸಾವಯವ ಕೃಷಿಕರ ಬಳಗದವರು 184 ಭತ್ತದ ತಳಿಗಳನ್ನು ಸಂರಕ್ಷಿಸಿದ್ದು, ಅವುಗಳ ಬಿತ್ತನೆ ಬೀಜವನ್ನು ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಮೈಸೂರು ಮಲ್ಲಿಗೆ ಕೂಡ ಒಂದು. ಈ ತಳಿಯ ಬೆಳೆ ಅವಧಿ 120 ದಿನಗಳು. ಈ ಭತ್ತವನ್ನು ಇದೀಗ ಹೆಚ್ಚಾಗಿ ದಾವಣಗೆರೆ ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ‘ಸಾಕಷ್ಟು ಜನರು ಇದೀಗ ಹೈಬ್ರೀಡ್ ತಳಿಯ ಅಕ್ಕಿಯನ್ನು ಸೇವನೆ ಮಾಡುತ್ತಿದ್ದಾರೆ. ಒಂದುವೇಳೆ ಮೈಸೂರು ಮಲ್ಲಿಗೆ ಸೇರಿದಂತೆ ವಿವಿಧ ದೇಸಿ ತಳಿಯ ಅಕ್ಕಿಯನ್ನು ತಿನ್ನಲು ಪ್ರಾರಂಭಿಸಿದರೆ ಮತ್ತೆಂದೂ ಹೈಬ್ರೀಡ್ ಕಡೆ ಮುಖ ಮಾಡುವುದಿಲ್ಲ. ಅಷ್ಟೊಂದು ರುಚಿಯನ್ನು ಈ ತಳಿಗಳು ಹೊಂದಿವೆ’ ಎನ್ನುತ್ತಾರೆ ಬಿತ್ತನೆ ಬೀಜ ಸಂರಕ್ಷಕ ಕುಂಬಳೂರಿನ ಎ.ಎನ್. ಆಂಜನೇಯ.
ಇಲ್ಲಿ ಕೇವಲ ಭತ್ತ ಮತ್ತು ರಾಗಿ ತಳಿಗಳು ಹಾಗೂ ತರಕಾರಿ ಬೆಳೆಗಳ ಬಿತ್ತನೆ ಬೀಜಗಳು ಮಾತ್ರವಲ್ಲದೆ 50ಕ್ಕೂ ಹೆಚ್ಚು ವೈವಿಧ್ಯಮಯ ದೇಶ, ವಿದೇಶದ ಬಾಳೆ ತಳಿಗಳನ್ನು ಒಂದೆಡೆ ನೋಡಬಹುದು. ಕೇರಳದ ತಿರುವನಂತಪುರಂನ ವಿನೋದ್ ನಾಯರ್ 400ಕ್ಕೂ ಹೆಚ್ಚು ಬಾಳೆಗಳನ್ನು ಸಂಗ್ರಹಿಸಿ ಬೆಳೆದಿದ್ದು, ಆ ಪೈಕಿ 50ಕ್ಕೂ ಹೆಚ್ಚು ತಳಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಆಸ್ಟ್ರೇಲಿಯಾದ ಲೇಡಿ ಫಿಂಗರ್ (ಸಕ್ಕರೆ ಬಾಳೆ), ಅಸ್ಸಾಂನ ಗೊತ್ತಿಯ, ಕನ್ಯಾಕುಮಾರಿಯ ಮಟ್ಟಿ ಸೇರಿದಂತೆ ಹಲವು ಅಪರೂಪದ ಬಾಳೆ ತಳಿಗಳು ಇಲ್ಲಿವೆ.
ಹಲವು ತಳಿಯ ಜೋಳ, ರಾಗಿ:
ಸಮ್ಮೇಳನದಲ್ಲಿ ಹಲವು ತಳಿಯ ಜೋಳಗಳ ಪ್ರದರ್ಶನ ಗಮನ ಸಳೆಯುತ್ತಿವೆ. ಹಿಂಗಾರಿ ನಿಡುಗುಂದಿ ಜೋಳ, ಮಾಲ್‌ದಮಡಿ ಜೋಳ, ದೊಡ್ಡಜೋಳ ಹಿಂಗಾರಿ, ಕೆಂಪುಗಂಡು ತೆನೆ ಹಿಂಗಾರಿ ಜೋಳ, ಕೆಂಪುರಾಗಿ ಜೋಳ, ಬಿಳಿಗೊಂಡಿ ಉದ್ದತೆನೆ ಜೋಳ, ಮಹಾರಾಷ್ಟ್ರದ ಕೆಂಪು ಜೋಳ ಸೇರಿದಂತೆ ಹಲವು ತಳಿಗಳ ಜೋಳಗಳನ್ನು ಇಲ್ಲಿ ಕಾಣಬಹುದು. ನಾಶಿನಿ ರಾಗಿ, ಕರಿಕಡ್ಡಿ ರಾಗಿ, ಜಗಳೂರು ರಾಗಿ, ಕಲ್ಲುರಾಗಿ, ನಾಕು ರಾಗಿ, ಗುಟ್ಟರಾಗಿ, ಜೇನುಗೂಡ ರಾಗಿ, ಉದುರು ಮಲ್ಲಿಗೆ ರಾಗಿ, ಗೆಜ್ಜೆ ರಾಗಿ, ಜೇನು ಮುಂಡಗ ರಾಗಿ, ರಾಗಳ್ಳಿ ಶಿವಳ್ಳಿ ರಾಗಿ, ಉಗಾಂಡ ರಾಗಿ ಸೇರಿದಂತೆ ಹಲವು ರಾಗಿ ತಳಿಗಳು ಇವೆ.
ಈಚಲು ಗರಿಯ ಗಡಿಯಾರ..!
ತಮಿಳುನಾಡಿ ಕೃಷಿಕರು ಈಚಲು ಮರದ ಗರಿಯಿಂದ ತಯಾರಿಸಿದ ಗಡಿಯಾರ, ಆಭರಣಗಳು ಕಿಸಾನ್ ಸ್ವರಾಜ್ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿವೆ. ಈಚಲು ಮರದ ಗರಿಯಿಂದ ವಿವಿಧ ಬಗೆಯ ಆಕರ್ಷಕ ಓಲೆಗಳು ಹಾಗೂ ಆಟಿಗಳನ್ನು ತಯಾರಿಸಲಾಗಿದೆ. ‘ಇತ್ತೀಚೆಗೆ ಪರಿಸರವನ್ನು ಪ್ರೀತಿಸುವ ಜನರು ಹೆಚ್ಚಾಗಿ ಈ ರೀತಿಯ ಓಲೆಗಳನ್ನು ಬಳಸುತ್ತಿದ್ದಾರೆ’ ಎನ್ನುತ್ತಾರೆ ತಮಿಳುನಾಡಿನ ಕೃಷಿಕ ಕಾರ್ತಿಕೇಯನ್.