ಜಿಲ್ಲೆ

ಕಿಸಾನ್ ಸಮ್ಮಾನ್‌ಗೆ ರಾಜ್ಯಸರ್ಕಾರ ಬ್ರೇಕ್?: ಹೋರಾಟಕ್ಕೆ ಸಜ್ಜಾದ ಮೈಷುಗರ್ ಕಬ್ಬು ಬೆಳೆಗಾರರು

ಕೆ.ಎನ್.ರಾಘವೇಂದ್ರ

ಮಂಡ್ಯ: ಸಣ್ಣ ಹಿಡುವಳಿ ಕೃಷಿ ಕುಟುಂಬಕ್ಕೆ ಅನುಕೂಲವಾಗಲೆಂದು ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ 4 ಸಾವಿರ ರೂಗಳನ್ನು ಸ್ಥಗಿತಗೊಳಿಸುವ ಮುನ್ಸೂಚನೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ತಲಾ 6 ಸಾವಿರ ರೂ ನೀಡುತ್ತಿದೆ. ಅಂತೆಯೇ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ರಾಜ್ಯಸರ್ಕಾರದಿಂದ 4 ಸಾವಿರ ರೂ ಸೇರಿಸಿ ಒಟ್ಟು 10 ಸಾವಿರ ರೂ ನೀಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಯೋಜನೆ ರದ್ದುಪಡಿಸುವುದಾಗಿ ಗೊಂದಲಗಳು ಹರಿದಾಡುತ್ತಿವೆ. ಇದು ಸಮಂಜಸವಾದ ಕ್ರಮವಲ್ಲ ಎಂದು ಹೇಳಿದರು.

ಯೋಜನೆ ಸ್ಥಗಿತದ ಬಗ್ಗೆ ರಾಜ್ಯಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತ ಇಲಾಖೆ ಅಧಿಕಾರಿಗಳಿಂದಲೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ರಾಜ್ಯದ ಸುಮಾರು 48 ಲಕ್ಷ ಕುಟುಂಬಗಳಿಗೆ ಕೃಷಿ ಸಮ್ಮಾನ್ ಯೋಜನೆಯ ಲಾಭ ದೊರೆಯುತ್ತಿದೆ. ಆದ್ದರಿಂದ ಯೋಜನೆಯನ್ನು ಮುಂದುವರಿಸಬೇಕು. ಒಂದು ವೇಳೆ ಸ್ಥಗಿತಗೊಳಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಕಬ್ಬಿನ ಬೆಳೆಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಮಾದರಿಯಲ್ಲಿ ಎಸ್‌ಎಪಿ ದರ ನಿಗದಿ ಮಾಡುವ ರಾಜ್ಯ ಸರ್ಕಾರದ ಹಕ್ಕನ್ನೇ ಸಕ್ಕರೆ ಮಾಲೀಕರ ಒಕ್ಕೂಟ ಕಸಿದಿಕೊಂಡಿದೆ. ಮಾತ್ರವಲ್ಲದೆ ಮದ್ರಾಸ್ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದು ವರ್ಷಗಳು ಉರುಳಿದರೂ ಅದನ್ನು ತೆರವುಗೊಳಿಸುವಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇನ್ನಾದರೂ ಆಸಕ್ತಿ ವಹಿಸಬೇಕು. ಉಪಉತ್ಪನ್ನಗಳ ಆಧಾರದ ಮೇಲೆ ರೈತರಿಗೆ ದರ ನೀಡುವಂತೆ ಸ್ವಾಮಿನಾಥನ್ ಆಯೋಗ ವರದಿ ನೀಡಿದೆ. ಕೆಲವು ಕಾರ್ಖಾನೆಗಳಲ್ಲಿ ಉಪಉತ್ಪನ್ನಗಳ ತಯಾರಿಕಾ ಘಟಕಗಳಿಲ್ಲ ಎಂಬ ಕುಂಟು ನೆಪವೊಡ್ಡಿ ರೈತರಿಗೆ ಸಿಗಬೇಕಾದ ವೈಜ್ಞಾನಿಕ ಬೆಲೆಯನ್ನು ಕೊಡುತ್ತಿಲ್ಲ ಎಂದು ಆರೋಪಿಸಿದರು.

ಹಿರಿಯ ಸಹಕಾರಿ ಕೀಲಾರ ಕೃಷ್ಣ ಮಾತನಾಡಿ, ಮಂಡ್ಯ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಹುದ್ದೆ ಖಾಲಿ ಇದ್ದು, ತಕ್ಷಣ ಈ ಎರಡೂ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ರೈತರು ನಿತ್ಯ ತಾಲೂಕು ಕಚೇರಿಯತ್ತ ಅಲೆಯುತ್ತಿದ್ದು, ಅಧಿಕಾರಿಗಳಿಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ರೈತರಿಗೆ ತೊಂದರೆ ನೀಡುವ ಸರ್ಕಾರಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ಅರಿತುಕೊಂಡರೆ ಒಳ್ಳೆಯದು ಎಂದು ಎಚ್ಚರಿಸಿದರು.

ಸಂಪಹಳ್ಳಿ ಶಿವಶಂಕರ್, ಎತ್ತಿನ ಸೀನಪ್ಪ, ತುಳಸೀಧರ್, ಚಾಮಲಾಪುರ ಬೊಮ್ಮಣ್ಣ, ಹುಲಿವಾನ ಬಾಲರಾಜು ಇದ್ದರು.